ಕಲಬುರಗಿ: ದರೋಡೆಕೋರರ ಮೇಲೆ ಪೊಲೀಸರಿಂದ ಫೈರಿಂಗ್; ಇಬ್ಬರ ಬಂಧನ

ಕಲಬುರಗಿ: ಕಳೆದ ಎರಡು ವಾರಗಳ ಹಿಂದೆ ನಗರದ ಪೂಜಾರಿ ಚೌಕ್ ಬಳಿ ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ 18 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಆರೋಪಿಗಳಿಬ್ಬರ ಮೇಲೆ ಪೊಲೀಸರು ಫೈರಿಂಗ್ ನಡೆಸಿ, ಅವರನ್ನು ಬಂಧಿಸಿರುವ ಘಟನೆ ನಗರದ ಬೇಲೂರು ಕ್ರಾಸ್ ಸಮೀಪ ಶನಿವಾರ ಬೆಳಗ್ಗೆ ನಡೆದಿದೆ.
ಹರಿಯಾಣ ಮೂಲದ ತಸ್ಲಿಮ್(28) ಮತ್ತು ಶರೀಫ್ (22) ಬಂಧಿತ ದರೋಡೆಕೋರರು ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು, ಈ ಹಿಂದೆ ಎಟಿಎಂ ದರೋಡೆ ಮಾಡಿರುವ ಆರೋಪಿಗಳು ಮತ್ತೊಮ್ಮೆ ದರೋಡೆ ಮಾಡಲು ನಗರಕ್ಕೆ ಆಗಮಿಸಿದ್ದರು. ಅನುಮಾನಾಸ್ಪದ ವಾಹನ ಗಮನಿಸಿದ ಪೊಲೀಸರು, ಸಬ್ ಅರ್ಬನ್ ಮತ್ತು ವಿವಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅವರದೇ ತಂಡಗಳನ್ನು ರಚಿಸಿ, ಆರೋಪಿಗಳನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಇಬ್ಬರ ಮೇಲೆ ಇನ್ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ಇಬ್ಬರ ಮೊಣಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ ಎಂದರು.
ಘಟನೆಯಲ್ಲಿ ಪಿಎಸ್‌ಐ ಬಸವರಾಜ್ ಹಾಗೂ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 9ರಂದು ಕಲಬುರಗಿ ನಗರದ ಪೂಜಾರಿ ಚೌಕ್ ನಲ್ಲಿದ್ದ ಎಸ್ಬಿಐ ಬ್ಯಾಂಕ್ ಎಟಿಎಂ ಅನ್ನು ಒಡೆದು ದರೋಡೆಕೋರರು 18 ಲಕ್ಷ ಹಣ ದೋಚಿದ್ದರು. ಆರೋಪಿಯನ್ನು ಬಂಧಿಸಲು ಸವಾಲಾಗಿದ್ದ ಈ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.