ತಲ್ವಾರ್ ನಿಂದ ಬರ್ತ್ ಡೇ ಕೇಕ್ ಕತ್ತರಿಸಿದ ಬಿಜೆಪಿಯ ಮಾಜಿ ಶಾಸಕನ ಸಹೋದರ : ಸಚಿವ ಪ್ರಿಯಾಂಕ್ ಖರ್ಗೆ ಖಂಡನೆ
ಕಲಬುರಗಿ : ಸೇಡಂನ ಬಿಜೆಪಿಯ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿ.ಬಿ.ಪಾಟೀಲ್ ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಜೃಂಭಣೆ ನಡೆಸಿರುವುದು ವರದಿಯಾಗಿದೆ. ಈ ಕುರಿತು ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಘಟನೆಯನ್ನು ಖಂಡಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇದು ʼಕಲಬುರಗಿ ರಿಪಬ್ಲಿಕ್ʼ ಮಾಡುವ ಪ್ರಯತ್ನವೇ? ಬಿಜೆಪಿಗರ ಪ್ರಕಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ? ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ ಪಕ್ಷದವರ ಈ ಕೃತ್ಯಕ್ಕೆ ಯಾವ ಸಮಜಾಯಿಷಿ ನೀಡುತ್ತಿರಿ? ಎಂದು ಪ್ರಶ್ನಿಸಿದ್ದಾರೆ.
ಡಾ.ಅಂಬೇಡ್ಕರ್ ಅವರ ಫೋಟೋ ಕಾಲಿನ ಸಮದಲ್ಲಿಟ್ಟು ತಲ್ವಾರ್ ಹಿಡಿದು ಕೇಕೆ ಹಾಕುತ್ತಿರುವ ಬಿಜೆಪಿಗರು ಗೂಂಡಾಗಿರಿ ಪ್ರದರ್ಶಿಸಿರುವುದಲ್ಲದೆ, ಬಾಬಾ ಸಾಹೇಬರ ಘನತೆಗೆ ಚ್ಯುತಿ ತಂದಿದ್ದಾರೆ. ಈ ತರಹ ಮಾಡಿ ಅಂಬೇಡ್ಕರ್ ವಿರೋಧಿ ಅಮಿತ್ ಶಾ ಅವರನ್ನು ಮೆಚ್ಚಿಸುವ ಪ್ರಯತ್ನ ಮಾಡ್ತಿದ್ದಾರಾ? ಎಂದು ಪ್ರಶ್ನೆ ಎತ್ತಿದ್ದಾರೆ.
ಈ ಕೃತ್ಯಕ್ಕೆ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರಾ ಅಥವಾ ಇಂತಹ ಘೋರ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರಾ? ಎಂದ ಅವರು, ಇದಕ್ಕಾಗಿ ಒಂದು ಸತ್ಯ ಶೋಧನ ಸಮಿತಿ ರಚಿಸಿಕೊಂಡು, ನಕಲಿ ಅಂಬೇಡ್ಕರ್ ವಾದಿಗಳಾದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರ ಜೊತೆಗೆ ಯಾವಾಗ ಕಲಬುರಗಿಗೆ ಬರುತ್ತೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.