ಕಲಬುರಗಿ | ಅಮಿತ್ ಶಾ ವಿರುದ್ಧ ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕ, ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕಲಬುರಗಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಕಲಬುರಗಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗವು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರ್ ಮಾತನಾಡಿ, 'ಬಾಬಾ ಸಾಹೇಬರನ್ನು ನೆನೆಯೋದು ಪ್ಯಾಷನ್ ಅಲ್ಲ, ಅದು ನಮ್ಮ ಆದ್ಯ ಕರ್ತವ್ಯವಾಗಿದೆ, ಪ್ರತಿ ಬಾರಿಯೂ ನೆನೆದಾಗ ಕೃತಜ್ಞತೆ ಸಲ್ಲಿಸಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ತನ್ನ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಕಾಲೇಜಿನ ಪ್ರಾಧ್ಯಾಪಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಮಾತನಾಡಿ, 'ಇಂದು ದೇಶದ ಎಲ್ಲಾ ದಮನಿತ ಸಮುದಾಯಗಳು ಎಚ್ಚರಗೊಂಡು ಅಂಬೇಡ್ಕರ್ ಅವರನ್ನು ಕೃತಜ್ಞತೆಯಿಂದ ನೆನೆಯುತ್ತಿರುವಾಗ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಮಾತು ದೇಶದ ಜನತೆಗೆ ಅವಮಾನ ಮಾಡಿದಂತಾಗಿದ್ದು, ಸಂವಿಧಾನಿಕ ಹುದ್ದೆಯಲ್ಲಿದ್ದು ಇದೊಂದು ಅಸಂವಿಧಾನಿಕ ಹೇಳಿಕೆ ನೀಡಿರುವುದು ಖಂಡನೀಯ' ಎಂದರು.
ಪ್ರತಿಭಟನೆಯಲ್ಲಿ ಪ್ರಾಧ್ಯಾಪಕರುಗಳಾದ ಡಾ.ಸಿದ್ದಪ್ಪ ಎಸ್.ಕಾಂತ, ಡಾ.ನಿರ್ಮಲಾ ಸಿರಗಾಪುರ, ಡಾ.ಸುದರ್ಶನ್ ಮದನಕರ್, ಡಾ.ಗಾಂದೀಜಿ ಮೋಳೆಕರ್, ಡಾ.ಕರಿಬಸಪ್ಪ, ಡಾ.ವಸಂತ ನಾಶಿ, ಬಿ.ಕೆ.ಪಂಡಿತ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.