ಕಲಬುರಗಿ | ಮೊಸಳೆ ತಂದು ಜೆಸ್ಕಾಂ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ

ಕಲಬುರಗಿ : ಬೆಳಗಿನ ಜಾವ ನಾಲ್ಕು ಗಂಟೆಗೆ ಗೋಧಿ ಬೆಳೆಗೆ ನೀರು ಬಿಡಲು ಹೋದಾಗ ರೈತನ ಜಮೀನಿನಲ್ಲಿ ಪ್ರತ್ಯಕ್ಷವಾಗಿರುವ ಮೊಸಳೆಯನ್ನು ಎತ್ತಿನ ಬಂಡಿಯಲ್ಲಿ ಕಟ್ಟಿಕೊಂಡು ಬಂದು ಜೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ಜಿಲ್ಲೆಯಲ್ಲಿ ನಡೆದಿದೆ.
ಅಫಜಲಪುರ ತಾಲ್ಲೂಕಿನ ಗೊಬ್ಬೂರ್ ಬಿ ಗ್ರಾಮದ ಲಕ್ಷ್ಮಣ ಪೂಜಾರಿ ಎಂಬ ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಜೆಸ್ಕಾಂ ಕಚೇರಿ ರೈತರ ಕೃಷಿ ಜಮೀನಿಗೆ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ರೈತರಿಗೆ ಬೆಳಗಿನ ಜಾವ 4 ಗಂಟೆ ಬದಲು 6 ಗಂಟೆಗೆ ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಆಗ್ರಹಿಸಿ ಗೊಬ್ಬೂರ್ ಬಿ ಗ್ರಾಮದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಮೊಸಳೆ ಇಟ್ಟು ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ದೇವಲ್ ಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್ಐ ರಾಹುಲ್ ಪಾವಡೆ ರೈತರ ಮನವೊಲಿಸಿ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಮೊಸಳೆಯನ್ನು ರಕ್ಷಿಸಲಾಯಿತು. ಎಎಸ್ಐ ಹಝ್ರತ್ ಅಲಿ , ಸಂಗಣ್ಣ ವಾಲಿಕರ್, ಸಂತೋಷ್ ನಾಯ್ಕೋಡಿ ಸೇರಿದಂತೆ ಮುಂತಾದವರು ಹಾಜರಿದ್ದರು.