ಕಲಬುರಗಿ | ಕೇಂದ್ರದ ಬಜೆಟ್ ಖಂಡಿಸಿ ಆಳಂದ ಪಟ್ಟಣದಲ್ಲಿ ಪ್ರತಿಭಟನೆ
ಭಾರತದಲ್ಲಿ ಬೃಹತ್ ಅಸಮಾನತೆ ಉಲ್ಬಣಿಸುವ ಬಜೆಟ್ ಮಂಡನೆ : ಸಲ್ಮಾನ್ ಖಾನ್ ಸಿ.ಎನ್.

ಕಲಬುರಗಿ : ಆರ್ಥಿಕ ಸಮೀಕ್ಷೆ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಜನರ ವೇತನಗಳಲ್ಲಿ ಇಳಿಕೆಯಾಗಿದೆ. ಶ್ರಮಿಕರ ಹತಾಶ ಸ್ಥಿತಿ ತೋರಿಸುತ್ತಿರುವಾಗ, ಈ ಬಜೆಟ್ ಶ್ರೀಮಂತರಿಗೆ ರಿಯಾಯಿತಿಗಳನ್ನು ನೀಡುತ್ತಲೇ, ಸರಕಾರಿ ವೆಚ್ಚಗಳನ್ನು ಕಡಿತಗೊಳಿಸುವತ್ತ ಒತ್ತು ನೀಡಿ, ಭಾರತದಲ್ಲಿನ ಬೃಹತ್ ಅಸಮಾನತೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು CPI (M) ಆಳಂದ ತಾಲೂಕಾ ಸಮಿತಿಯ ಸಲ್ಮಾನ್ ಖಾನ್ ಸಿ.ಎನ್. ಕಳವಳ ವ್ಯಕ್ತಪಡಿಸಿದ್ದರು.
ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಎದುರು CPI (M) ತಾಲೂಕು ಸಮಿತಿಯಿಂದ ಕೇಂದ್ರದ ಬಜೆಟ್ ಖಂಡಿಸಿ ಉಪ ತಹಶೀಲ್ದಾರ್ ಸಿದ್ರಾಮ್ ಎಸ್. ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, 2025-26ರಲ್ಲಿ ಹಂಚಿಕೆಗಳು ಎಸ್.ಸಿ. ಮತ್ತು ಎಸ್.ಟಿ.ಗಳಿಗೆ ಶೇ.3.4 ಮತ್ತು ಶೇ. 2.6 ವೆಚ್ಚ ನೀಡಿರುವುದನ್ನು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮೋದ ಪಾಂಚಾಳ ಮಾತನಾಡಿ, ಮೋದಿ ಸರಕಾರದ ಆರ್ಥಿಕ ನೀತಿಗಳ ಬರಡುತನವನ್ನು ಬಿಂಬಿಸುತ್ತದೆ. ಬಿಕ್ಕಟ್ಟಿನ ಪ್ರಮಾಣವಾಗಲಿ, ಅದರ ಸ್ವರೂಪವಾಗಲಿ ಸರಕಾರ ಮತ್ತು ಅದರ ಹಣಕಾಸು ಸಚಿವರಿಗೆ ಗೋಚರಿಸುವಂತೆ ಕಾಣುತ್ತಿಲ್ಲ. ಅವರು ಅರ್ಥವ್ಯವಸ್ಥೆಯ ಮಹಾನ್ ರೀತಿಯಲ್ಲಿ ನಡೆಸುತ್ತಿದ್ದೇವೆ ಎಂಬ ಭ್ರಮೆಯಲ್ಲೇ ಮುಂದುವರಿಯುತ್ತಿದ್ದಾರೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಆಳಂದ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಮಾತನಾಡಿ, ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಮಧ್ಯಮ ವರ್ಗಗಳಿಗೆ ಸಹಾಯ ಮಾಡಲಾಗುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಆದಾಯ ತೆರಿಗೆ ರಿಯಾಯಿತಿಗಳಿಂದಾಗಿ ಸರಕಾರ ಅನುಭವಿಸುವ ರೂಪಾಯಿ ಒಂದು ಲಕ್ಷ ಕೋಟಿ ನಷ್ಟದಿಂದ ಪ್ರಯೋಜನದ ಪಾಲು ಪಡೆಯುವವರು ಶೇ.1ರಷ್ಟು ಮಂದಿ ಮಾತ್ರ ಎಂದರು.
ಈ ಸಂದರ್ಭದಲ್ಲಿ ರೂಪಾ ಇಕ್ಕಳಕಿ, ಸಮರ್ಥ್, ಶಿವಶಂರಣಪ್ಪ ಬೆಳಸುರೆ ಲ., ವಿಜಯ್, ಅಬ್ದುಲ್, ವಿಶಾಲ್, ಅಶಿಶ್ ಇತರರು ಹಾಜರಿದ್ದರು.