ಕಲಬುರಗಿ | ಡಿ.18ರಂದು ಕುರುಬರ ಸಂಘದಿoದ ಬೆಳಗಾವಿಯಲ್ಲಿ ಧರಣಿ : ಗುರುನಾಥ ಪೂಜಾರಿ
ಕಲಬುರಗಿ : 3ಬಿ ಪ್ರವರ್ಗದಲ್ಲಿರುವ ಪಂಚಮಸಾಲಿ ಸಮಾಜವನ್ನು 2ಎಗೆ ಸೇರ್ಪಡೆಗೆ ವಿರೋಧಿಸಿ ಮತ್ತು ಜಾತಿಜನಗಣತಿ ವರದಿ ಕೂಡಲೇ ಅಂಗೀಕರಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚೆನ್ನಪ್ಪರೆಡ್ಡಿ ಹಾವನೂರ ವರದಿಯಂತೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿರುವ ಕಾರಣಕ್ಕೆ 3 ಬಿಯಲ್ಲಿ ಸೇರಿಸಲಾಗಿದೆ, ಆದರೆ ಒತ್ತಡದ ಮೂಲಕ 3ಬಿಯಿಂದ 2ಎಗೆ ಬರುತ್ತಿರುವುದರಿಂದ 102 ಹಿಂದುಳಿದ ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದರು.
ಪoಚಮಸಾಲಿಯವರ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಸರಕಾರ ಅಂಗೀಕರಿಸಬಾರದೆಂದು ಮನವಿ ಮಾಡಿದ ಅವರು, ಮುಖ್ಯಮಂತ್ರಿಗಳು ಈಗಾಗಲೇ 340 ಕಲಂ ಅಡಿಯಲ್ಲಿ ಅವರ ಮನವಿಯನ್ನು ಅಂಗೀಕರಿಸಲಿಕ್ಕೆ ಅವಕಾಶ ಇಲ್ಲ ಎಂದು ಹೇಳಿರುವುದು ನಮ್ಮ ಸಂಘ ಸ್ವಾಗತಿಸುತ್ತದೆ ಎಂದು ಹೇಳಿದರು.
ಕಳೆದ ಮಾರ್ಚ್ ನಲ್ಲಿ ಜೈಪ್ರಕಾಶ ಹೆಗಡೆಯವರು ಸಲ್ಲಿಸಿರುವ ವರದಿಯನ್ನು ಅಂಗೀಕರಿಸಲಿಕ್ಕೆ ಮೀನಮೀಷ ಎಣಿಸುತ್ತಿರುವ ಸರಕಾರದ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.18ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಧರಣಿ ನಡೆಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿಗೊಂಡ ಕಟ್ಟಿಮನಿ, ನಾಗೇಂದ್ರಪ್ಪ ಎ.ಪೂಜಾರಿ, ಡಾ.ಬಾಬು ಪೂಜಾರಿ, ಶಿವಲಿಂಗಪ್ಪ ಎಂ, ಪೀರಪ್ಪ ಕೆ.ಪೂಜಾರಿ ಮತ್ತಿತರರು ಇದ್ದರು.