ಕಲಬುರಗಿ | ಎ.5 ರಂದು ಲೀಡ್ ಬ್ಯಾಂಕ್ ಎದುರು ಪ್ರತಿಭಟನೆ : ಭೀಮಾಶಂಕರ್ ಮಾಡಿಯಾಳ

ಕಲಬುರಗಿ : ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ, ನಿರುದ್ಯೋಗ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಸರಿಯಾದ ಸಮಯಕ್ಕೆ ಸಾಲ ನೀಡುವಂತೆ ಆಗ್ರಹಿಸಿ ಎ.5 ರಂದು ಬೆಳ್ಳಗೆ 11 ಗಂಟೆಗೆ ನಗರದ ಲೀಡ್ ಬ್ಯಾಂಕ್ ಮುಂದೆ ಕಿಸಾನ್ ಸಭಾ ಹಾಗೂ ಆಲ್ ಇಂಡಿಯಾ ತಂಝಿಮ್ ಇನ್ಸಾಫ್ ಬಿಕೆಎಮ್ ಯು ನೇತೃತ್ವದಲ್ಲಿ ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ್ ಮಾಡಿಯಾಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎ.15 ರಿಂದ ಏ.17ವರೆಗೆ ತಮಿಳುನಾಡಿನ ನಾಗಪಟ್ಟಣಂ ನಗರದಲ್ಲಿ ಕಿಸಾನ್ ಸಭಾ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕುರಿಸಾಗಾಣಿಕೆ, ಕೃಷಿ ಉಪಕರಣಕ್ಕಾಗಿ ಸಮಯಕ್ಕೆ ಸರಿಯಾಗಿ ಸಾಲ ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು.
ಫಾತಿಮಾ ಶೇಖ್ ಮಾತನಾಡಿ, ಪದವಿ ಮುಗಿಸಿರುವ ಮಹಿಳೆಯರಿಗೆ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಬೇಕು ಹಾಗೂ ಬ್ಯಾಂಕ್ ಗಳಲ್ಲಿ ಸರಿಯಾದ ಸಮಯಕ್ಕೆ ಸಾಲ ಸಿಗದೇ ಇರುವುದರಿಂದ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ತೆಗೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಬ್ಯಾಂಕ್ ಗಳು ಸರಿಯಾದ ಸಮಯಕ್ಕೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮೌಲಾಮುಲ್ಲಾ, ಮಲ್ಲಿಕಾರ್ಜುನ ಕೆಲ್ಲೂರ, ಸಾಜಿದ್ ಆಹಮ್ಮದ ದಿಗ್ಗಾಂವ್, ಶಾಹಿನ್ ಸುಲ್ತಾನ ಸೇರಿದಂತೆ ಮತ್ತಿತರರು ಇದ್ದರು.