ಕಲಬುರಗಿ | ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾದರೆ ಕ್ರಮಕ್ಕೆ ಶಿಫಾರಸು : ಶಿವುಪುತ್ರಪ್ಪ ಪಾಟೀಲ ಮುನ್ನೊಳ್ಳಿ

ಕಲಬುರಗಿ : ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಪಂಚಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲಿ ಹಿಂದೇಟಾದರೆ ಸಂಬಂಧಿತ ಅಧಿಕಾರಿ ಮೇಲೆ ಕ್ರಮಕ್ಕೆ ಶಿಫಾರಸು ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಪಂಚಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ ಮುನ್ನೊಳ್ಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಆಳಂದ ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಕರೆದ ರಾಜ್ಯ ಸರ್ಕಾರದ ಪಂಚಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.
ತಾಲೂಕಿನಲ್ಲಿ ಪಂಚಗ್ಯಾರೆಂಟಿ ಯೋಜನೆ ಅನುಷ್ಠಾನದಲ್ಲಿ ಇನ್ನೂ ಕೊಂಚ ಲೋಪದೋಷಗಳಿಂದಾಗಿ ಫಲಾನುಭವಿಗಳಿಗೆ ಯೋಜನೆ ತಲುಪದ ಬಗ್ಗೆ ದೂರುಗಳು ಬರುತ್ತಿವೆ. ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವಲ್ಲಿ ಅಧಿಕಾರಿಗಳು ಯತ್ನಿಸುವ ಮೂಲಕ ಪೂರ್ಣ ಪ್ರಮಾಣದ ಗುರಿಯನ್ನು ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಸಾಮಾನ್ಯ ಜನತೆಗೆ ಈ ಯೋಜನೆಗಳ ಸೌಲಭ್ಯ ಸಮರ್ಪಕವಾಗಿ ಲಭಿಸಬೇಕೆಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿರುವುದರಿಂದ, ಪ್ರತಿಯೊಬ್ಬ ಅಧಿಕಾರಿಯೂ ಜವಾಬ್ದಾರಿಯಿಂದ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕೆಂದು ಅವರು ಒತ್ತಿ ಹೇಳಿದರು.
ಸಭೆಗೆ ಗೈರಾಗಿದ್ದ ಅನ್ನಭಾಗ್ಯ ಯೋಜನೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ ತಾಪಂ ಇಒ ಅವರಿಗೆ ಸೂಚನೆ ನೀಡಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಸಭೆಯಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯ ವಿವರಿಸುವಂತೆ ಕೋರಿ ಗುರಿ ಸಾಧಿಸಲು ಹಿಂದೇಟಾಗಬಾರದು. ಸಮಿತಿಯ ನಿಮಾವಳಿ ಬದ್ಧತೆಯಾಗಿ ತಮ್ಮ ಇಲಾಖೆಗೆ ವಹಿಸಿದ್ದ ಕಾರ್ಯವನ್ನ ಚಾಚೂತಪ್ಪದೆ ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದು ಹೇಳಿದರು.
ಆಳಂದ ಸಾರಿಗೆ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ, ಶಕ್ತಿ ಯೋಜನೆಯಲ್ಲಿ ಮಹಿಳೆಯರ ಉಚಿತ ಪ್ರಯಾಣ ಸಾಧನೆಯ ವರದಿ ಮಂಡಿಸಿದರು.
ಜೆಸ್ಕಾಂ ಎಇಇ ಪ್ರಭು, ಕಡಗಂಚಿ ರಾಘವೇಂದ್ರ ಪಾಟೀಲ ಹಾಜರಿದ್ದರು. ಗೃಹಜ್ಯೋತಿ ಯೋಜನೆಯಲ್ಲಿ ಸಮರ್ಪಕ ಜಾರಿಗೆ ಸೂಚಿಸಲಾಯಿತು. ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಗುರುನಾಥ ಪಾಟೀಲ ಹೊದಲೂರ, ಮಹಾಂತೇಶ ಪಾಟೀಲ, ಅವಿನಾಶ ರಾಠೋಡ, ಮಹೇಶ ಹಿರೋಳಿ, ಲಕ್ಷ್ಮಣ ತಳಕೇರಿ, ಪ್ರಕಾಶ ಕಾಂಬಳೆ, ಸುರೇಶ ಬಿ.ಪಾಟೀಲ, ರಾಜು ಮೂಲಗೆ, ಸಲ್ಮಾನಖಾನ್, ವಾಜೀದ್ ಅನ್ಸಾರಿ, ನಾಮದೇವ ಶಾಂತಿಬಾ, ಅಂಬಿಕಾ ಕುಂಬಾರ, ಕಾಂಚನಾ ರವಿಶೆಟ್ಟಿ ಅವರು ಯೋಜನೆಗಳಲ್ಲಿನ ಲೋಪದೋಷವನ್ನು ಸರಿಪಡಿಸುವಂತೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳು, ಇನ್ನಿತರ ಸದಸ್ಯರು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿರುವ ಹಲವಾರು ಪ್ರತಿನಿಧಿಗಳು ಭಾಗವಹಿಸಿದರು.