ಕಲಬುರಗಿ | ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ : ಬಿಜೆಪಿ ನಾಯಕರಿಂದ ಏಕತಾ ನಡಿಗೆ
ರಾಷ್ಟ್ರ ನಾಯಕರನ್ನು ಗುರುತಿಸುವ ಗುಣ ಕಾಂಗ್ರೆಸ್ಗೆ ಇಲ್ಲ : ಛಲವಾದಿ ನಾಯರಾಯಣಸ್ವಾಮಿ
ಕಲಬುರಗಿ : ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ದೇಶದ ಐಕ್ಯತೆಗಾಗಿ ನಗರದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಏಕತೆ ನಡಿಗೆ (ರನ್ ಫಾರ್ ಯೂನಿಟಿ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಕಾಲ್ನಡಿಗೆ ಮೂಲಕ ಬಿಜೆಪಿ ನಾಯಕರು ಏಕತಾ ನಡಿಗೆಯಲ್ಲಿ ಪಾಲ್ಗೊಂಡರು.
ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ʼಸರ್ದಾರ್ ಪಟೇಲರ 150ನೇ ಜನ್ಮಜಯಂತಿ ಅಂಗವಾಗಿ ಹಾಗೂ ದೇಶದ ಐಕ್ಯತೆಗಾಗಿ ಏಕತೆ ನಡಿಗೆ ಹಮ್ಮಿಕೊಳ್ಳಲಾಗಿದೆ. ಸ್ವತಂತ್ರ ಪೂರ್ವದಲ್ಲಿ ಹೋರಾಟ ಹಾಗೂ ಸ್ವತಂತ್ರದ ನಂತರದ ದಿನಗಳಲ್ಲಿ ಸರ್ದಾರ್ ಪಟೇಲರ ಹೋರಾಟ ಸ್ಮರಣೀಯವಾದದ್ದುʼ ಎಂದು ಹೇಳಿದರು.
ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಬಿಟ್ಟರೆ, ಈ ದೇಶದಲ್ಲಿ ಬೇರೆ ಯಾವ ನಾಯಕರು ಇಲ್ಲವೆಂಬಂತೆ ಕಾಂಗ್ರೆಸ್ ವರ್ತಿಸುತ್ತದೆ. ಸರ್ದಾರ್ ಪಟೇಲರು ಈ ರಾಷ್ಟ್ರದ ನಾಯಕ ಎಂಬುದನ್ನು ಕಾಂಗ್ರೆಸ್ ಮರೆತಿದ್ದು, ರಾಷ್ಟ್ರ ನಾಯಕರನ್ನು ಗುರುತಿಸುವ ಮನೋಭಾವ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅನುಮಾನ ಮಾಡಿದ್ದು ಸಾಲದೆಂಬಂತೆ, ಮೊನ್ನೆಯಷ್ಟೇ ಪ್ರಿಯಾಂಕಾ ಗಾಂಧಿ ಅವರ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ದಲಿತ ಸಮುದಾಯದ ನಾಯಕ ಎಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಡೆ ನಿಲ್ಲಿಸುವ ಮೂಲಕ, ಗಾಂಧಿ ಪರಿವಾರ ದಲಿತರಿಗೆ ಅಪಮಾನ ಮಾಡಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಅಂಬಾರಾಯ ಅಷ್ಟಗಿ, ಬಸವರಾಜ ಬೆಣ್ಣೂರ, ಗಿರಿರಾಜ್ ಯಳಮೇಲಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.