ಕಲಬುರಗಿ | ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-1; ಸುಸೂತ್ರವಾಗಿ ನಡೆಸಲು ಜಿಲ್ಲಾಧಿಕಾರಿಗಳಿಂದ ಸೂಚನೆ

ಕಲಬುರಗಿ : ಪ್ರಸಕ್ತ 2024-25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ. ಪರೀಕ್ಷೆ-1 ಇದೇ ಮಾ.1 ರಿಂದ 20ರವರೆಗೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದೇ ಸುಸೂತ್ರವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೂಚನೆ ನೀಡಿದರು.
ಗುರುವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಕೇಂದ್ರ ಮುಖ್ಯಸ್ಥರು, ಮಾರ್ಗಾಧಿಕಾರಿಗಳು, ವೀಕ್ಷಕರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ವಿದ್ಯಾರ್ಥಿ ಘಟ್ಟದ ಪ್ರಮುಖ ಹಂತದ ಪರೀಕ್ಷೆ ಇದಾಗಿರುವುದರಿಂದ ಎಲ್ಲಿಯೂ ಲೋಪವಾಗದಂತೆ ಪಾರದರ್ಶಕವಾಗಿ ನಡೆಸಬೇಕು. ಯಾವುದೇ ರೀತಿಯ ನಕಲಿಗೆ ಇಲ್ಲಿ ಅವಕಾಶ ಇಲ್ಲ ಎಂದ ಅವರು, ಎಲ್ಲಾದರೂ ನಕಲು ಪ್ರಕರಣ ವರದಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಕಲಬುರಗಿ ನಗರದಲ್ಲಿ 25 ಮತ್ತು ತಾಲೂಕು ಪ್ರಾಂತ್ಯದಲ್ಲಿ 26 ಸೇರಿ 51 ಪರೀಕ್ಷಾ ಕೇಂದ್ರಗಳು ಗುರುತಿಸಲಾಗಿದೆ. ಈ ವರ್ಷ ರೆಗ್ಯೂಲರ್ ಆಗಿ 27,994 ಮತ್ತು ಖಾಸಗಿಯಾಗಿ 741 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು 2,683 ಪುನರಾವರ್ತಿತ ಅಭ್ಯರ್ಥಿಗಳು, ಫಲಿತಾಂಶ ಹೆಚ್ಚಳಕ್ಕೆ 31 ಜನ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಪರೀಕ್ಷೆ ಸುಗಮವಾಗಿ ನಡೆಯುವ ಸಂಬಂಧ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷೆ ನಡೆಯುವ ಮುನ್ನ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಇರುವುದನ್ನು ಕೇಂದ್ರದ ಮುಖ್ಯಸ್ಥರು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಹತ್ತಿರದ ಪೊಲೀಸ್ ಠಾಣೆಯಿಂದ ಪೊಲೀಸ್ ಸಿಬ್ಬಂದಿ ಸೇವೆ ಪಡೆಯುವಂತೆ ಸೂಚಿಸಿದರು.
ಪರೀಕ್ಷಾ ಕೇಂದ್ರದ ಅಧೀಕ್ಷರು, ಸಹ ಮುಖ್ಯ ಅಧ್ಯಕ್ಷರು, ವಿಶೇಷ ಜಾಗೃತ ದಳದ ಸದಸ್ಯರು ಬೆಳಿಗ್ಗೆ 7.30 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಮತ್ತು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಪರೀಕ್ಷೆಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ವಿದ್ಯಾರ್ಥಿ ಹೊರತುಪಡಿಸಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೂರನೇ ವ್ಯಕ್ತಿಗೆ ಪ್ರವೇಶವಿಲ್ಲ ಎಂದು ಡಿ.ಸಿ ಸ್ಪಷ್ಟಪಡಿಸಿದರು.
ಮೊಬೈಲ್ ಬಳಕೆ ನಿಷೇಧ, ಸಿಸಿಟಿವಿ. ಕಣ್ಗಾವಲಿನಲ್ಲಿ ಪರೀಕ್ಷೆ :
ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾ ಕೇಂದ್ರದಿಂದ ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷೆ ಮೇಲ್ವಿಚಾರಣೆ ಮಾಡಲಾಗುತ್ತದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ನಗರ ಪೊಲೀಸ್ ಉಪ ಆಯುಕ್ತ ಪ್ರವೀಣ ಎಚ್.ನಾಯಕ್, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಅಶೋಕ ಶಾಸ್ತ್ರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.