ಕಲಬುರಗಿ: ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅಹ್ಮದ್ ಸರಡಗಿ ನಿಧನ
ಕಲಬುರಗಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಸಂಸದ, ವಿಧಾನ ಪರಿಷತ್ ಮಾಜಿ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಬಿ.ಎ., ಎಲ್.ಎಲ್.ಬಿ ಶಿಕ್ಷಣ ಪಡೆದಿದ್ದ ಸರಡಗಿ ಅವರು, 1999 ರಿಂದ 2009 ವರೆಗೆ ಎರಡು ಅವಧಿಗೆ ಕಲಬುರಗಿ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. 2014 ರಿಂದ 2020ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಸರಕಾರದ ವಿವಿಧ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.
ಜೂನ್ 5, 1944 ರಂದು ಕಲಬುರಗಿಯಲ್ಲಿ ಜನಿಸಿದ ಇಕ್ಬಾಲ್ ಅಹ್ಮದ್ ಸರಡಗಿ ಅವರು, ತನ್ನ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಮೃತರು ಪತ್ನಿ ಸೇರಿ ಓರ್ವ ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ.
ಬುಧವಾರ ಸಂಜೆ 5 ಗಂಟೆಗೆ ಹಫತ್ ಗುಂಬಜ್ ಪ್ರದೇಶದ ನ್ಯಾಷನಲ್ ಕಾಲೇಜು ಸಮೀಪದ ಮಸೀದಿಯಲ್ಲಿ ನಮಾಝ್ ಎ ಜನಾಝಾ (ಅಂತಿಮ ಪ್ರಾರ್ಥನೆ) ನೆರವೇರಲಿದೆ ಎಂದು ಕುಟುಂಬಸ್ಥರಾದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಕೀಲ್ ಸರಡಗಿ ತಿಳಿಸಿದ್ದಾರೆ.
ಇಕ್ಬಾಲ್ ಅಹ್ಮದ್ ಸರಡಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.