ಕಲಬುರಗಿ | ಎ.12ರಂದು ಹಿರೇಸಾವಳಗಿಯಲ್ಲಿ ಶಿವಲಿಂಗೇಶ್ವರ ರಥೋತ್ಸವ : ರಮೇಶ ಕನಗೊಂಡ

ಕಲಬುರಗಿ : ತಾಲ್ಲೂಕಿನ ಹಿರೇಸಾವಳಗಿ ಗ್ರಾಮದಲ್ಲಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ನಿಮಿತ್ತ ಶ್ರೀ ಶಿವಲಿಂಗೇಶ್ವರ ರಥೋತ್ಸವ ಎ.12ರಂದು ರಾತ್ರಿ 8ಕ್ಕೆ ಜರುಗಲಿದೆ ಎಂದು ಗ್ರಾ.ಪಂ ಸದಸ್ಯ ರಮೇಶ ಕನಗೊಂಡ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಪೀಠಾಧಿಪತಿ ಶ್ರೀ ಗುರುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಜಾತ್ರೋತ್ಸವ ಆರಂಭವಾಗಿದೆ. ಎ.11ರಂದು ಸಂಜೆ 4 ಗಂಟೆಗೆ ಉಚ್ಚಾಯಿ ಉತ್ಸವ ಜರುಗಲಿದೆ. ಎ.12ರಂದು ಹನುಮಾನ ಜಯಂತಿ ಹಾಗೂ ದವನದ ಹುಣ್ಣಿಮೆ ಹಿನ್ನೆಲೆ ರಾತ್ರಿ 8ಕ್ಕೆ ಮಠದ ಪೀಠಾಧಿಪತಿ ಗುರುನಾಥ ಸ್ವಾಮೀಜಿ ಪಲ್ಲಕ್ಕಿಯಲ್ಲಿ ಆರೂಢರಾಗಿ ರಥದ ಸ್ಥಳಕ್ಕೆ ಬಂದು ಅಮೃತ ಹಸ್ತದಿಂದ ರಥಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಎ.13ರಂದು ಮದ್ದು ಸುಡುವುದು, ಎ.14ರಂದು ಬೆಳಗ್ಗೆ 11ಕ್ಕೆ ಬಿದಾಯಿ ಹಾಗೂ ಸುಪ್ರಸಿದ್ದ ಕಲಾವಿದರಿಂದ ಭಜನೆ, ವಾದನ, ಗೀಗೀ ಪದಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಸಿ.ಪೂಜಾರಿ, ಸೋಮಲಿಂಗ, ಉಸ್ಮಾನ್ ಲಾಫ್, ಶಾಂತಕುಮಾರ, ಯಲ್ಲಾಲಿಂಗ, ಚಂದ್ರಾಕಾಂತ, ಯಮನಯ್ಯ ಗುತ್ತೇದಾರ, ರಾಹುಲ್ ಹಾವನೂರ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.