ಕಲಬುರಗಿ | ಎಸ್.ಎಂ.ಕೃಷ್ಣ ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ : ಬಾಲರಾಜ್ ಗುತ್ತೇದಾರ
ಬಾಲರಾಜ್ ಗುತ್ತೇದಾರ, ಎಸ್.ಎಂ.ಕೃಷ್ಣ | PC : PTI
ಕಲಬುರಗಿ : ಅತ್ಯಂತ ವಿದ್ಯಾವಂತರು, ಸುಶಿಕ್ಷಿತರು ಆಗಿದ್ದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ ಅವರು ಅಜಾತಶತ್ರುವಾಗಿದ್ದರು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ದೇಶಕ್ಕೆ, ರಾಜ್ಯಕ್ಕೆ ಅವರು ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅವರು ಗಣನೀಯವಾಗಿ ಕೆಲಸ ಮಾಡಿದ್ದಾರೆ. ಅವರು ನಾಡಿಗೆ ಸಲ್ಲಿಸಿರುವ ಸೇವೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಮಾದರಿ ರಾಜಕಾರಣಿ. ಅವರ ಅಗಲಿಕೆ ನನಗೆ ನೋವು ತಂದಿದೆ ಎಂದು ಗುತ್ತೇದಾರ ತಿಳಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ರಾಜಕೀಯದ ಸುದೀರ್ಘ ಪಯಣ ಸ್ಫೂರ್ತಿದಾಯಕ. ಬಹುಶಃ ಎಲ್ಲಾ ರಾಜಕಾರಣಿಗಳಿಗೂ ಅಷ್ಟು ಸುದೀರ್ಘ ರಾಜಕೀಯ ಅವಕಾಶ ಸಿಗುವುದು ಕಷ್ಟ. ಬೆಂಗಳೂರು ನಗರ ಅಭಿವೃದ್ಧಿ, ಐಟಿ ಬಿಟಿ ಕೊಡುಗೆ ಅಪಾರ. ನಮ್ಮ ರಾಜ್ಯದ ಇತಿಹಾಸದಲ್ಲಿ ಕೃಷ್ಣ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.