ಕಲಬುರಗಿ | ಸ್ಟಾರ್ಟ್ಅಪ್ ಪ್ರಾರಂಭಿಸಿ, ನೀವೇ ಸ್ವತಃ ಉದ್ಯೋಗ ಸೃಷ್ಟಿಸಿ : ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ : ಸ್ಟಾರ್ಟ್ಅಪ್ ಪ್ರಾರಂಭಿಸಿ, ನೀವೇ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗಿಗಳಿಗೆ ಕೆಲಸ ಕೊಡುವಂತವರಾಗಬೇಕು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಹೈದಾರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಆವರಣದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಕಲ್ಯಾಣ ಕರ್ನಾಟಕ ಸ್ಟಾರ್ಟ್ಅಪ್ ಕಾಂಕ್ಲೇವ್' ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಇದ್ದು, ಈ ಭಾಗದಲ್ಲಿ ಅತಿ ಅವಶ್ಯಕತೆ ಇದ್ದ ಹೊಸ ಉದ್ದಿಮೆಗಳಿಗೆ ಈ ಕಾರ್ಯಕ್ರಮ ಮೆಟ್ಟಿಲಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈದಾರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಎಂಎಲ್ಸಿ ಶಶೀಲ್ ನಮೋಶಿ ಮಾತನಾಡಿ, ಖ್ಯಾತ ಉದ್ಯಮಿಗಳಾದ ಎಲಾನ್ ಮಸ್ಕ್, ಅಜೀಂ ಪ್ರೇಮ್ ಜೀ ಮತ್ತಿತರರು ಯಾರೂ ಕೂಡ ಬಂಗಾರದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಲ್ಲ, ಅವರು ತಮ್ಮದೇ ಕೆಲಸದಲ್ಲಿ ಪಳಗಿ ಯಶಸ್ಸನ್ನು ಪಡೆದವರಾಗಿದ್ದಾರೆ. ಹಾಗಾಗಿ ಸ್ಟಾರ್ಟ್ಅಪ್ ಎನ್ನುವುದು ಸಡನ್ ಆಗಿ ಬರುವಂತದ್ದಲ್ಲ, ಅದಕ್ಕೆ ಬಹಳಷ್ಟು ಶ್ರಮ ವಹಿಸಬೇಕು, ಶ್ರಮ ಕೊಟ್ಟಾಗ ಮಾತ್ರ ನೀವು ಉದ್ಯಮವನ್ನು ಕಟ್ಟಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಸ ಉದ್ಯಮಗಳ ಸೃಷ್ಟಿಸಲು ಬೇಕಾಗಿರುವ ಸವಲತ್ತುಗಳು, ಹೊಸ ಅವಿಷ್ಕಾರ, ನೆಟ್ವರ್ಕಿಂಗ್, ಹೊಸ ಉದ್ಯಮಗಳ ಕುರಿತು ಚರ್ಚಿಸಲಾಯಿತು. ಸಂಪನ್ಮೂಲ ವ್ಯಕ್ತಿ ಮಹೇಶ್ ಮಾಶಾಳ ಅವರು ಸ್ಟಾರ್ಟ್ಅಪ್ ಹೇಗೆ ಪ್ರಾರಂಭಿಸುವುದು, ಹೇಗೆ ನಿರ್ವಹಿಸುವುದು ಸೇರಿದಂತೆ ಹಲವು ಕೌಶಲ್ಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಎಸ್.ಎಸ್.ಎಫ್ ಫೌಂಡೇಶನ್ ಬಸವರೆಡ್ಡಿ, ಶ್ರೀಶೈಲ ಪಟಾಟೆ, ರಾಜಾ ಭಿ.ಭೀಮಳ್ಳಿ, ಉದಯಕುಮಾರ್ ಚಿಂಚೋಳಿ, ಡಾ.ಅನಿಲಕುಮಾರ ಪಟ್ಟಣ, ಡಾ.ಎಸ್.ಆರ್.ಹರವಾಳ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಆರ್ ಪಾಟೀಲ್, ಉಪ ಪ್ರಾಚಾರ್ಯರಾದ ಡಾ.ಎಸ್.ಆರ್ ಹೊಟ್ಟಿ, ಡಾ.ಭಾರತಿ ಹರಸೂರ, ಡಾ.ನಾಗೇಶ್ ಸಾಲಿಮಠ ಉಪಸ್ಥಿತರಿದ್ದರು.