ಕಲಬುರಗಿ | ತೊಗರಿಗೆ ನೆಟೆ ರೋಗ ಪರಿಹಾರಕ್ಕೆ ಸುಭಾಷ್ ಗುತ್ತೇದಾರ್ ಒತ್ತಾಯ
ಸುಭಾಷ್ ಆರ್.ಗುತ್ತೇದಾರ್
ಕಲಬುರಗಿ : ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆಯ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ, ಬೆಳೆ ವಿಮೆ ಮಂಜೂರಿ ಮಾಡಬೇಕು ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಬಿತ್ತನೆಯಾದ 6 ಲಕ್ಷ ಹೆಕ್ಟರ್ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ 2 ಲಕ್ಷ ಹೆಕ್ಟರ್ ಬೆಳೆ ನೆಟೆ ರೋಗದಿಂದ ಒಣಗಿದೆ. ಗೊಬ್ಬರ, ಔಷಧ, ಬಿತ್ತನೆ ಬೀಜ, ಕೂಲಿಗಾಗಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ವ್ಯಯ ಮಾಡಿದ ಹಣ ವಾಪಸ್ ಬರುವುದಿಲ್ಲ ಎಂಬ ಆತಂಕ ರೈತರಲ್ಲಿ ಮೂಡಿದೆ. ರಾಜ್ಯ ಸರಕಾರ ಕೂಡಲೇ ತೊಗರಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಡ ಹೇರಿದ್ದಾರೆ.
ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆ ಸಮೀಕ್ಷೆ ಮಾಡಿ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಅದರ ಜೊತೆಗೆ ಬೆಳೆ ವಿಮೆಯೂ ಮಂಜೂರು ಮಾಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಿ ಮುಖ್ಯಮಂತ್ರಿಗಳು 1 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ತೊಗರಿ ಮಂಡಳಿ ಬಲವರ್ಧನೆಗಾಗಿ ಕನಿಷ್ಠ 20 ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ವಿಚಿತ್ರ ರೋಗದಿಂದ ತೊಗರಿ ನಾಶವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳು ಸೇರಿದಂತೆ ಆಳಂದ ತಾಲ್ಲೂಕಿನಲ್ಲಿ ಬಹಳಷ್ಟು ತೊಗರಿ ಬೆಳೆ ನಾಶವಾಗುತ್ತಿದೆ. ಇಷ್ಟು ದಿನ ಚೆನ್ನಾಗಿದ್ದು ಈಗ ದಿಢೀರನೆ ಹಾನಿಯಾಗುತ್ತಿದೆ. ಎಂದೂ ಕಂಡಿಲ್ಲದ ರೋಗ ಬಂದಿದ್ದರಿoದ ಈ ಸಲದ ತೊಗರಿ ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಾಣುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಕ್ಫ್ ವಿಷಯದಲ್ಲಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡುತ್ತಿಲ್ಲ. ತಾಲ್ಲೂಕು ವ್ಯಾಪ್ತಿಯಲ್ಲಿಯೇ ಅನೇಕ ರೈತರ ಮತ್ತು ದೇವಸ್ಥಾನಗಳ ಆಸ್ತಿಗಳು ವಕ್ಫ್ ಎಂದು ನಮೂದಾಗಿವೆ ಇದರ ಕುರಿತು ಏಕೆ ಮಾತನಾಡುತ್ತಿಲ್ಲ ?. ಶಾಸಕ ಬಿ.ಆರ್.ಪಾಟೀಲರಿಗೆ ನಿಜವಾಗಿ ರೈತಪರ ಕಾಳಜಿ ಇದ್ದರೆ 1974ರ ಗೆಜೆಟ್ ರದ್ದುಪಡಿಸಲು ಒತ್ತಾಯಿಸಲಿ, ಅಲ್ಲದೇ ತಾವು ಮುಖ್ಯಮಂತ್ರಿಗಳ ಸಲಹೆಗಾರರಾಗಿರುವುದರಿಂದ ಒಣಗಿರುವ ತೊಗರಿ ಬೆಳೆಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹೆಚ್ಚಿನ ಪರಿಹಾರ ದೊರಕಿಸಿ ಕೊಡಲಿ ಎಂದು ಆಗ್ರಹಿಸಿದ್ದಾರೆ.