ಕಲಬುರಗಿ | ಪೊಲೀಸರ ಮೇಲೆ ಹಲ್ಲೆಗೆ ಯತ್ನ : ಕೊಲೆ ಆರೋಪಿಯ ಕಾಲಿಗೆ ಗುಂಡೇಟು
ಕಲಬುರಗಿ : ಖಲೀಲ್ ಅಲಿಯಾಸ್ ಹಮಾಲವಾಡಿಯ ಖಲೀಲ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಆಝಾದ್ ಪುರ ರೋಡ್ ಹತ್ತಿರ ನಡೆದಿದೆ.
ಪ್ರಮುಖ ಆರೋಪಿ ಯಾದುಲ್ಲ ಕಾಲೋನಿಯ ನಿವಾಸಿ ಕೌಸರ್ ಬೇಗ್ (40) ಎಂದು ತಿಳಿದುಬಂದಿದೆ,
ವಿವಿ ಪೊಲೀಸ್ ಠಾಣೆಯ ವ್ಯಾಪ್ತಿಯ ಇಬ್ಬರು ಕಾನ್ ಸ್ಟೇಬಲ್ ಸಿಬ್ಬಂದಿ ಆರೋಪಿಯನ್ನು ಬಂಧಿಸಲು ಹೋದಾಗ, ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ, ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ವೇಳೆಯಲ್ಲಿ ತಮ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಯಾಸೀನ್ ಮತ್ತು ಸಂಜೀವ್ ಕುಮಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆರೋಪಿಯ ಕಾಲಿಗೆ ಗುಂಡು ತಾಗಿರುವುದಾಗಿ ತಿಳಿದುಬಂದಿದೆ.
ಸದ್ಯ ಆರೋಪಿಯು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story