ಕಲಬುರಗಿ | ತೊಗರಿ ಬೆಳೆ ಹಾನಿ : ಸಮೀಕ್ಷೆಗೆ ಅರುಣಕುಮಾರ್ ಪಾಟೀಲ್ ಆಗ್ರಹ
ಕಲಬುರಗಿ : ಅಫಜಲ್ಪುರ ತಾಲ್ಲೂಕಿನ ನೀಲೂರ ಗ್ರಾಮದಲ್ಲಿ ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಯನ್ನು ರಾಜಕೀಯ ನಾಯಕರು ಸೇರಿದಂತೆ ರೈತ ಮುಖಂಡರ ನಿಯೋಗದಿಂದ ವೀಕ್ಷಣೆ ಮಾಡಲಾಯಿತು.
ವಿಕ್ಷಣೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಕುಮಾರ್ ಪಾಟೀಲ್, ನಮ್ಮ ತಾಲೂಕಿನ ರೈತರು ಪ್ರಮುಖವಾಗಿ ತೊಗರಿ ಬೆಳೆ ಬೆಳೆಯುತ್ತಾರೆ. ಅಲ್ಲದೆ ನಮ್ಮ ಭಾಗದ ಭೂಮಿಗೆ ತೊಗರಿ ಸೂಕ್ತವಾದ ಬೆಳೆಯಾಗಿದೆ. ಆದರೆ ಮಳೆ ಅಭಾವದಿಂದ ಈ ಬಾರಿ ಭಾರೀ ಪ್ರಮಾಣದಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿ ಹಾಳಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಕೂಡಲೇ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.
ಬಿತ್ತನೆಯಿಂದ ಬೆಳೆ ಬಂದು ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸುವ ತನಕ ರೈತರು ಸಾಕಷ್ಟು ಶ್ರಮ ಪಡುತ್ತಾರೆ. ಕೃಷಿಗಾಗಿ ಸಾಲ ಮಾಡಿಕೊಂಡಿರುತ್ತಾರೆ. ಆದರೆ ಪ್ರಕೃತಿ ವಿಕೋಪದಿಂದಾಗಿ ಇಂತಹ ಸಮಸ್ಯೆಗಳು ಉಲ್ಬಬಣಿಸಿದಾಗ ರೈತರಿಗೆ ದಿಕ್ಕು ತೋಚದಂತಾಗುತ್ತದೆ. ಆದರೂ ರೈತರು ಧೃತಿಗೆಡಬೇಕಾಗಿಲ್ಲ. ಸಾಲಬಾಧೆ, ಬೆಳೆ ಹಾನಿಯಿಂದ ಯಾವ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವುದು ಬೇಡ, ನಮ್ಮ ಸರಕಾರ ರೈತರ ಹಿತ ಕಾಯುವ ಸರಕಾರವಾಗಿದೆ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಮಾತನಾಡಿ, ರೈತರು ನಿಯಮಾನುಸಾರ ಮತ್ತು ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಂತೆ ಕೃಷಿ ಮಾಡಬೇಕು. ಕೆಲವು ತಪ್ಪು ತಿಳುವಳಿಕೆಯಿಂದಾಗಿ ಬೆಳೆ ಹಾಳಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮ ಭಾಗದಲ್ಲಿ ಸರಾಸರಿ ಮಳೆಯಾಗುವುದಿಲ್ಲ. ಹೀಗಾಗಿ ಹೆಚ್ಚಿನ ಮಳೆಯಿಂದಲೂ ಮತ್ತು ಕಡಿಮೆ ಮಳೆಯಿಂದಲೂ ಬೆಳೆ ನೆಟೆ ರೋಗಕ್ಕೆ ತುತ್ತಾಗುತ್ತವೆ. ಇಂತಹ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಔಷಧೋಪಚಾರ ಮಾಡಿದರೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ರೈತರಾದ ಪರಮೇಶ್ವರ ಲೋಣಿ, ಕೃಷ್ಣ ಬೀಲ್ಕರ್, ಜಗದೇವಪ್ಪ ಪಾಟೀಲ್, ಬ್ರಹ್ಮಾನಂದ ಪಾಟೀಲ್, ಸಾತಲಿಂಗಪ್ಪ ಲೋಣಿ, ಹಣಮಂತ್ರಾವ ಪಾಟೀಲ್, ಪಾಂಡು ಬೀಲ್ಕರ್, ಮಲ್ಲು ಹಡಪದ,ಮಹಾನಿಂಗ ನಾಯ್ಕೋಡಿ, ಮಲ್ಲಿನಾಥ ಗಣಮುಖಿ ಶರಣು ಹಾಳಮಳ್ಳಿ , ಚಂದು ಲೋಣಿ ಸೇರಿದಂತೆ ಇತರ ರೈತರಿದ್ದರು.