ಕಲಬುರಗಿ | ಮನೆ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳಿಗೆ ದಂಡ, ಜೈಲು ಶಿಕ್ಷೆ

ಕಲಬುರಗಿ : ನಗರದ ಸಿದ್ದೇಶ್ವರ ಕಾಲೋನಿಯಲ್ಲಿ 2022ರ ಡಿ.22 ರಂದು ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಬ್ಬರಿಗೆ ಇಲ್ಲಿನ 3ನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ 3 ಮತ್ತು 2 ವರ್ಷ ಸಾಧಾರಣ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಆದೇಶಿಸಿದೆ.
ವಿಶ್ವವಿದ್ಯಾಲಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳಾದ ಮಲ್ಲು ಮಲ್ಲೇಶಿ ಮತ್ತು ಶೀಲವಂತ ಅಂಜಿರ್ಯ ಕಾಳೆ ಅವರಿಗೆ ನ್ಯಾಯಾಲಯವು, ಕಲಂ 380 ಮತ್ತು 454 ಐಪಿಸಿ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, ಕ್ರಮವಾಗಿ ಮೂರು ವರ್ಷ ಮತ್ತು ಎರಡು ವರ್ಷಗಳ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ.
ಕಲಬುರಗಿ ನಗರದ ಸಬ್ ಅರ್ಬನ್ ಉಪ ವಿಭಾಗದ ಎ.ಸಿಪಿ ಗೀತಾ ಬೇನಾಳ ಅವರು ಮತ್ತು ತಂಡದವರು ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಮತ್ತು ಮುದ್ದೆ ಮಾಲನ್ನು ಪತ್ತೆ ಮಾಡಿದ್ದರು. ನಂತರ ಅಪಾದಿತರು ಕಲಂ 454, 380 ಐಪಿಸಿ ಅಡಿಯಲ್ಲಿ ತನಿಖೆ ರುಜುವಾತು ಆಗಿದ್ದರಿಂದ ತನಿಖಾಧಿಕಾರಿಗಳಾದ ಸುಶೀಲಕುಮಾರ ಪಿಐ ವಿಶ್ವವಿದ್ಯಾಲಯರವರು ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣೆ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದ ಕುರಿತಾಗಿ ವಾದ-ವಿವಾದಗಳನ್ನು ಆಲಿಸಿದ ನಂತರ ನ್ಯಾ.ದಸ್ತಗೀರ ಸಾಬ ಅಬ್ದುಲ್ ರಝಾಕ್ ಮುಲ್ಲಾ ಅವರು ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ.
ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಅವರು ವಾದ ಮಂಡಿಸಿದ್ದರು.