ಕಲಬುರಗಿ | ಜಲಾಶಯಕ್ಕೆ ಈಜಲು ಇಳಿದ ಇಬ್ಬರು ನೀರುಪಾಲು

ಕಲಬುರಗಿ: ಈದುಲ್ ಫಿತ್ರ್ ದಿನವಾದ ಮಂಗಳವಾರ ಕಮಲಾಪುರ ತಾಲೂಕಿನ ಗಂಡೋರಿನಾಲ ಜಲಾಶಯದಲ್ಲಿ ಸ್ನಾನಕ್ಕಿಳಿದ ಇಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಟಿಪ್ಪು ಚೌಕ್ ನಿವಾಸಿ ಆಸಿಫ್ ಹಮೀದ್(43) ಹಾಗೂ ಮಾಲಗತ್ತಿ ಕ್ರಾಸ್ ನಿವಾಸಿ ನಿಝಾಮ್ ಚೋಟು (30) ನೀರುಪಾಲಾಗಿ ನಾಪತ್ತೆಯಾದವರು.
ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಆಸಿಫ್ ಹಮೀದ್, ನಿಝಾಮ್ ಚೋಟು ಸಹಿತ ಆರು ಮಂದಿ ಗೆಳೆಯರು ಗಂಡೋರಿನಾಲ ಜಲಾಶಯಕ್ಕೆ ಬಂದಿದ್ದರು.
ಈ ವೇಳೆ ಆರು ಮಂದಿ ಜಲಾಶಯಕ್ಕೆ ಇಳಿದಿದ್ದಾರೆ. ಈ ವೇಳೆ ನಾಲ್ವರು ಜಲಾಶಯ ದಂಡಿಯಲ್ಲಿ ಈಜಾಡಿದ್ದರೇ, ಆಸಿಫ್ ಹಮೀದ್, ಹಾಗೂ ನಿಝಾಮ್ ಚೋಟು ನೀರಿನ ಆಳಕ್ಕೆ ಇಳಿದಿದ್ದರೆನ್ನಲಾಗಿದೆ. ಆಳ ನೀರಿನಿಂದ ದಂಡಿಗೆ ಬರಲು ಆಗದೆ ಅವರಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅಗ್ನಿಶಾಮಕ ಈಜುಗಾರರ ತಂಡ ಹಾಗೂ ಪೊಲೀಸರು ಆಗಮಿಸಿ ಸತತ ಕಾರ್ಯಾಚರಣೆ ನಡೆಸಿದರೂ ಅವರು ಪತ್ತೆ ಆಗಿಲ್ಲ.
Next Story