ಕಲಬುರಗಿ | ಯುಜಿಸಿ ಹೊಸ ನಿಯಮಗಳು ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿ: ಎಸ್ಎಫ್ಐ
ಕಲಬುರಗಿ : ವಿಶ್ವವಿದ್ಯಾಲಯಗಳ ಅನುದಾನ ಆಯೋಗ(UGC) 2025ರ ಉನ್ನತ ಶಿಕ್ಷಣ ಕರಡು ಸಮಿತಿಯ ಹೊಸ ನಿಯಮಗಳು ದೇಶದ ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿಯಾಗಿದ್ದು, ಕೂಡಲೇ ಅದನ್ನು ತಿರಸ್ಕಾರ ಮಾಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಗುಲ್ಬರ್ಗಾ ವಿವಿಯ ಕುಲಸಚಿವರ ಮೂಲಕ ಕೇಂದ್ರದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಮತ್ತು ಕಾಲೇಜುಗಳಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಮತ್ತು ಮುಂಬಡ್ತಿಯ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರ್ವಹಿಸುವ ಕ್ರಮಗಳ ಪ್ರಸ್ತಾಪವನ್ನು ಎಸ್ಎಫ್ಐ ಕಲಬುರಗಿ ಜಿಲ್ಲಾ ಸಮಿತಿ ತಿರಸ್ಕರಿಸುತ್ತಿದೆ. ಈ ಹೊಸ ಪ್ರಸ್ತಾವಗಳು ಕಾರ್ಪೊರೇಟ್ ಶಿಕ್ಷಣ ವ್ಯವಸ್ಥೆಗೆ ಸಂಪೂರ್ಣವಾಗಿ ಅವಕಾಶ ಮಾಡಿಕೊಡುವಂತಾಗಿವೆ, ಇಂತಹ ನಿಯಮಗಳು ತಂದಲ್ಲಿ ಶಿಕ್ಷಣ ವ್ಯವಸ್ಥೆಗೆ ಬಹಳಷ್ಟು ಹಾನಿಯಾಗುತ್ತದೆ ಎಂದು ಎಸ್ಎಫ್ಐ ಹೇಳಿಕೊಂಡಿದೆ.
ಪರಿಷ್ಕೃತ ನಿಯಮಗಳು ಉಪಕುಲಪತಿಗಳ ಆಯ್ಕೆಯಲ್ಲಿ ರಾಜ್ಯ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವನ್ನು ಒದಗಿಸುತ್ತವೆ. ಮತ್ತು ಉಪ ಕುಲಪತಿಗಳ ಆಯ್ಕೆಯಲ್ಲಿಯೂ ಸಹ ಕನಿಷ್ಥ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಉದ್ಯಮ ರಂಗದ ಪರಿಣಿತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಅವಕಾಶ ನೀಡಲಾಗಿದೆ. ಉಪ ಕುಲಪತಿಗಳ ಆಯ್ಕೆಯ ಸಮಿತಿಯಲ್ಲಿಯೂ ಸಹ ಬದಲಾವಣೆ ಮಾಡಲಾಗಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಹಾಗಾಗಿ ಇದನ್ನು ಜಾರಿ ಮಾಡಬಾರದು ಎಂದು ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಹ ಕಾರ್ಯದರ್ಶಿ, ಸುಜಾತಾ.ವೈ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್, ನಾಗಮ್ಮ, ಭರತ್, ಅಭಿ, ಮಾಲಾಶ್ರೀ, ಹುಲಗಮ್ಮ ಸೇರಿದಂತೆ ಇತರೆ ಜಿಲ್ಲಾ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.