ಕಲಬುರಗಿ | ನರೇಗಾ ಕಾಮಗಾರಿ ಸ್ಥಳದಲ್ಲಿ ವಿವಿಧ ವ್ಯವಸ್ಥೆ: ಜ್ಯೋತಿ ಸಾಗರ

ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿಗಳು ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಸ್ಥಳಗಳಲ್ಲಿ ಬೇಸಿಕ ಸೌಲಭ್ಯಗಳು ಕೊಡಲಾಗುತ್ತಿದೆ ಎಂದು ಐಇಸಿ ಸಂಯೋಜಕಿ ಜ್ಯೋತಿ ಸಾಗರ ಹೇಳಿದರು.
ಅವರು ಕಾಳಗಿ ತಾಲೂಕಿನ ಅರಣಕಲ ಗ್ರಾಮ ಪಂಚಾಯತಿಯಲ್ಲಿ ನರೇಗಾದಡಿ ಕೈಗೆತ್ತಿಕೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯತ್ ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿಗಾಗಿ ನೆರಳಿನ (ಟೆಂಟ್) ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಒ ಆರ್ ಎಸ್ ಪಾಕೆಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಕಳೆದ ವರ್ಷಕ್ಕಿಂತ ಈ ವರ್ಷ ಬೇಸಿಗೆ ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳು (ಟೆಂಟ್) ಮತ್ತು ಆರೋಗ್ಯ ಕಿಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಹಿರಿಯ ನಾಗರಿಗರು, ವಿಶೇಷ ಚೇತನರು. ಗರ್ಭಿಣಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದ್ದು, ಇದೀಗ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಿದ ಕೆಲಸದ ಪ್ರಮಾಣದಲ್ಲಿ ಎಪ್ರಿಲ್ ನಿಂದ ಮೇ ತಿಂಗಳ ಅಂತ್ಯದವರೆಗೆ ಶೇ.30ರಷ್ಟು ರಿಯಾಯಿತಿ ನೀಡಿದ್ದು, ಇದರ ಲಾಭಪಡೆದುಕೊಳ್ಳುವಂತೆ ಕೂಲಿಕಾರರಿಗೆ ಸಲಹೆ ನೀಡಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ನರೇಗಾದಡಿ ಕೆಲಸ ನಿರ್ವಹಿಸುವ ಆಕುಶಲ ಪರಿಷ್ಕರಣೆ ಮಾಡಿ ಎ.1ರಿಂದ ಅನ್ವಯವಾಗುವಂತೆ 370 ರೂಪಾಯಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುತ್ತದೆ ಹಾಗೂ ಉದ್ಯೋಗಖಾತ್ರಿಯ ಏಕೀಕೃತ ಸಹಾಯವಾಣಿ 8277506000 ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿ.ಎಫ್ ರೇವಣಸಿದ್ದಪ್ಪ, ಗ್ರಾಮ ಕಾಯಕ ಮಿತ್ರ ಭಾಗ್ಯಶ್ರೀ, ತಾಂಡಾ ರೋಜಗಾರ ಮಿತ್ರ ಹೇಮನಾಥ, ಪರುಶುರಾಮ, ದತ್ತು, ನಾಗೇಂದ್ರಪ್ಪ, ಹಿರಣಪ್ಪ ಹಾಗು 375 ಜನ ಕೂಲಿ ಕಾರ್ಮಿಕರು ಇದ್ದರು.