ಕಲಬುರಗಿ: ಹಿರಿಯ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಮತದಾನ
ಕಲಬುರಗಿ: ಏಪ್ರಿಲ್ 25 ರಿಂದ 26ರ ವರೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಜಿಲ್ಲೆಯಾದ್ಯಂತ ಗುರುವಾರದಿಂದ ಆರಂಭವಾಗಿದೆ.
ಈ ಪ್ರಯುಕ್ತ ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 68ರ ವ್ಯಾಪ್ತಿಯ ಮನೆಯೊಂದರಲ್ಲಿ ಹೋಮ್ ಮೇಡ್ ವೋಟಿಂಗ್ ಮಾಡುವ ಮೂಲಕ ಹಿರಿಯ ನಾಗರಿಕರಿಬ್ಬರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಗುಲಬರ್ಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,233 ಹಿರಿಯ ನಾಗರಿಕರು ಮತ್ತು 22,123 ವಿಶೇಷ ಚೇತನರಿದ್ದು, ಇದರಲ್ಲಿ ಕ್ರಮವಾಗಿ 1,149 ಹಿರಿಯ ನಾಗರಿಕರು ಹಾಗೂ 396 ವಿಶೇಷಚೇತನರನ್ನು ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಲಾಗಿದೆ.ಇದಕ್ಕಾಗಿ ಜಿಲ್ಲಾದ್ಯಂತ ಸುಮಾರು 81 ತಂಡಗಳನ್ನು ರಚಿಸಲಾಗಿದೆ.
ಪ್ರತಿ ತಂಡದೊಂದಿಗೆ ಪಿ.ಆರ್.ಓ, ಎ.ಪಿ.ಆರ್.ಓ, ಮೈಕ್ರೋ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಇರಲಿದ್ದು, ಮನೆ ಮನೆಗೆ ಪೋಸ್ಟಲ್ ಬಾಕ್ಸ್ ನೊಂದಿಗೆ ತೆರಳಿ ಮತದಾನ ಮಾಡಿಸಲಿದ್ದಾರೆ. ಈ ಕುರಿತು ಈಗಾಗಲೇ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಗಮನಕ್ಕೂ ತರಲಾಗಿದೆ ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.