ಕಲಬುರಗಿ | ಮಹಿಳೆ ಸದಾ ಕಾಲಕ್ಕೂ ಅನನ್ಯ ಪ್ರತಿಭೆ : ಡಾ.ಭಾಗ್ಯಶ್ರೀ

ಕಲಬುರಗಿ : ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸದಾ ಕಾಲದಲ್ಲೂ ಮಹಿಳಿಯರು ಅನನ್ಯ ಪ್ರತಿಭೆಗಳನ್ನು ಒಳಗೊಂಡಿರುತ್ತಾರೆ ಆದರೆ ಮಹಿಳೆಯರಿಗೆ ಅವಶ್ಯಕತೆ ತಕ್ಕಂತೆ ವೇದಿಕೆ ಸಿಗಬೇಕು. ಮನೆಯಲ್ಲಿನ ಸಂಸಾರವನ್ನು ನಿಭಾಯಿಸಿ ಸಮಾಜದಲ್ಲಿ ಸಾಧನೆ ಮಾಡುವ ಶಕ್ತಿ ನಾರಿಯರಲ್ಲಿದೆ ಎಂದು ಖ್ಯಾತ ವೈದ್ಯರಾದ ಡಾ.ಭಾಗ್ಯಶ್ರೀ ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ಸೇಡಂ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ದಾನೇಶ್ವರಿ ಮಹಿಳಾ ಸ್ವ-ಸಹಾಯ ಸಂಘ ವತಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು.
ಸಮಾಜದಲ್ಲಿ ಎಲ್ಲಾ ಸ್ಥರಗಳಲ್ಲಿ ಮಹಿಳಯರು ಇಂದು ತಮ್ಮ ಸ್ಥಾನವನ್ನು ಭದ್ರವಾಗಿ ತಲುಪುತ್ತಿದ್ದಾರೆ. ಹೆಣ್ಣು, ಗಂಡು ಸಮನಾಗಿ ಮುನ್ನಡೆದಾಗ ಮಾತ್ರ ಸಂಸಾರದ ಬಂಡಿ ಸಾಗುತ್ತದೆ. ಯಾವುದೇ ಕ್ಷೇತ್ರಗಳಲ್ಲಾಗಲಿ ಮಹಿಳೆಯರಿಗೆ ಸಮಾನತೆ ಸಿಸಬೇಕೆಂದು ಅವರು ಹೇಳಿದರು.
ಉದ್ಘಾಟಕರಾಗಿ ಆಗಮಸಿದ್ದ ಕೋ.ಭಾ.ಶಿ ಸಂಸ್ಥೆಯ ಕಾರ್ಯದರ್ಶಿ ಅನುರಾಧ ಪಾಟೀಲ ಅವರು ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮಾರ್ಚ್ 8 ರಂದೆ ಅಷ್ಟೇ ಮುಖ್ಯವಾಗಿರದೆ, ಮಹಿಳೆಯರಿಗೆ ಪ್ರತಿದಿನವೂ ಸಹ ಸಮಾನತೆ ಹಾಗೂ ಅವಕಾಶವನ್ನು ಕಲ್ಪಿಸುವ ಸಂದರ್ಭ ರೂಪುಗೊಳ್ಳಬೇಕು. ಬದುಕಿನಲ್ಲಿ ನಾವೆಲ್ಲರೂ ಅತ್ಯಂತ ಸುಭದ್ರವಾಗಿ ಹಾಗೂ ಸಂತೋಷದಿoದ ಬಾಳಬೇಕಾದರೆ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು.
ಮಹಿಳೆಯರ ಕುರಿತು ಉಪನ್ಯಾಸ ನೀಡಿದ ಡಾ.ಅಮೃತ ಮುಮ್ಮಾಜಿ ಅವರು, ಮಹಿಳೆಯರು ಸುದೀರ್ಘ ಕಾಲ ನೋವುಂಡು ಈಗ ಮುನ್ನಲೆಗೆ ಬಂದವರಾಗಿದ್ದು, ಸಮಾಜದಲ್ಲಿ ಗಂಡಿಗೆ ನೀಡುವ ಪ್ರಾಮುಖ್ಯತೆ ಮಹಿಳೆಯರಿಗೂ ನಿಡಬೇಕು. ಸರ್ಕಾರದಿಂದ ಅನೇಕ ಸೌಲಭ್ಯಗಳು ಮಹಿಳೆಯರ ಪರವಾಗಿವೆ ಎಂದರು.
ವೇದಿಕೆ ಮೇಲೆ ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾ ಲಲಿತಾ ಯಾಕಾಪುರ, ಸುವರ್ಣ ಎಸ್ ಪಾಟೀಲ, ಮುಧೋಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ ಅವರು ಉಪಸ್ಥಿತರಿದ್ದರು. ನಿರೂಪಣೆಯನ್ನು ಚಿತ್ರಾ ಬಂಗಾರ ನೆರವೇರಿಸಿದರು. ಸ್ವಾಗತ ಗೀತೆಯನ್ನು ಸಂಗೀತ ರೆಮ್ಮಣ್ಣಿ, ಭವಾನು ಕೇಶವಾರ ಹಾಗೂ ಸಂಧ್ಯಾ ಸಂಗಡಿಗರು ಹಾಡಿದರು. ಈರಮ್ಮ ಪಾಟೀಲ ವಂದಿಸಿದರು.
ಸಮಾಜದಲ್ಲಿ ಗಣನೀಯ ಸೇವೆಯನ್ನು ಹಾಗೂ ಮಹಿಳಾಪರ ಸಾಧನೆಗಳನ್ನು ಗುರುತಿಸಿ ರತ್ನಕಲಾ ಮಹಿಪಾಲರೆಡ್ಡಿ, ಮಲ್ಲಮ್ಮ ಬಡಿಗೇರ, ಹೆಷ್ ರಾಜಶ್ರೀ, ಮಲ್ಲಮ್ಮ ಸಣ್ಣೂರಕರ್, ಸಂಗಮ್ಮ ತೊಟ್ನಳ್ಳಿ, ಚೆನ್ನಮ್ಮ ಮಂಗಲಗಿ, ಉಮಾ ಮಹೇಶ್ವರಿ, ಶಾಂತ ಸಜ್ಜನ್, ಸಂಗಮ್ಮ ಮಠಪತಿ, ಅನ್ನಪೂರ್ಣ ಸಂಪಾ, ರೇಣುಕಾ ಮರಗೋಳ, ರಾಜೇಶ್ವರಿ ಏರಿ ಅವರುಗಳಿಗೆ ವಿಶೇಷ ಸನ್ಮಾನವನ್ನು ಮಾಡಿದರು.