ಕಲಬುರಗಿ | ಯುವ ಸಮೂಹವೇ ದೇಶದ ಶಕ್ತಿ: ಪ್ರೊ.ದಯಾನಂದ ಅಗಸರ
ಕಲಬುರಗಿ : ಮಾನಸಿಕ ಮತ್ತು ದೈಹಿಕ ಸದೃಢತೆ ಹೊಂದಿದ ಯುವ ಸಮೂಹ ದೇಶದ ನಿಜವಾದ ಆಸ್ತಿ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು .
ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ ಡಾ.ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ ʼಸ್ವಾಮಿ ವಿವೇಕಾನಂದರ ಜಯಂತಿʼ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಮಾನವ ಸಂಪನ್ಮೂಲ, ಪ್ರಕೃತಿ ಸಂಪನ್ಮೂಲ ಮತ್ತು ಜ್ಞಾನ ಸಂಪನ್ಮೂಲವು ದೇಶದ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುವ ಸಾಮರ್ಥ್ಯವನ್ನು ಬಡಿದೆಬ್ಬಿಸಿ ರಾಷ್ಟ್ರ ಅಭಿವೃದ್ಧಿಗೆ ಸಮರ್ಪಿಸುವುದುದೇ ನಿಜವಾದ ಶಿಕ್ಷಣ ಎಂದರು.
ಕಾರ್ಯಕ್ರಮಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್, ತೀಕ್ಷ್ಣ ಬುದ್ಧಿ ಮತ್ತು ಸದೃಢ ಮಾಂಸ ಖಂಡ ಹೊಂದಿರುವ ಯುವಕರನ್ನು ಕೊಟ್ಟರೆ ಇಡೀ ಸಮಾಜವೇ ಬದಲಾಯಿಸುವ ಶಕ್ತಿ ಯುವಕರಲ್ಲಿ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ, ಸ್ವಾಮಿ ವಿವೇಕಾನಂದರ ಅಧ್ಯಯನ ಪೀಠ ಮುಖ್ಯಸ್ಥರಾದ ಪ್ರೋ ವಿ.ಎಮ್ ಜಾಲಿ, ಪತ್ರಿಕೋದ್ಯಮ ವಿಭಾಗ ಸಂಯೋಜಕರಾದ ಡಾ.ಸುರೇಶ್ ಜಂಗೆ, ವಿವಿ ವಿಶೇಷ ಅಧಿಕಾರಿಗಳಾದ ಬಸವರಾಜ ಸಣ್ಣಕ್ಕಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.