ಕನಕದಾಸರು ಭಕ್ತಿ ಕವಿ, ಸಂಗೀತಗಾರ, ತತ್ವಜ್ಞಾನಿ ಸಮಾಜ ಸುಧಾರಕ : ಡಾ.ರಾಜೇಂದ್ರ ಕೊಂಡಾ
ಕಲಬುರಗಿ: ಕನಕದಾಸರು ರಾಜ್ಯದ ಓರ್ವ ಪ್ರಸಿದ್ಧ ಭಕ್ತಿ ಕವಿ, ಸಂಗೀತಗಾರ, ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಂಯೋಜಕ. ಅವರ ಕೀರ್ತನೆಗಳು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿವೆ ಎಂದು ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕನಕದಾಸರು ಹರಿದಾಸ ಸಾಹಿತ್ಯ ಚಳವಳಿಯ ಭಾಗವಾಗಿದ್ದರು. ಅವರ ಜನ್ಮದಿನವನ್ನು ಪ್ರತಿ ವರ್ಷ ಕನಕದಾಸರ ಜಯಂತಿ ಎಂದು ಆಚರಿಸಲಾಗುತ್ತದೆ.
ಮಾನವರೆಲ್ಲರೂ ಒಂದೇ ಜಾತಿ, ಮತ್ತೊಂದು ಜಾತಿ ಇಲ್ಲ ಎಂದು ವಿಶ್ವ ಭ್ರಾತೃತ್ವದ ಪರಿಕಲ್ಪನೆಯನ್ನು ಅವರ ಸಾಹಿತ್ಯದ ಮೂಲಕ ತಿಳಿಯಬಹುದಾಗಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಮೋಹನರಾಜ ಪತ್ತಾರ ಮಾತನಾಡಿ, ಕನಕದಾಸರು ತಮ್ಮ ಜೀವನವನ್ನು ಸಮಾಜಕ್ಕಾಗಿ ಅರ್ಪಿಸಿ, ಅನುಭವದೊಂದಿಗೆ ವಿಶ್ವಕ್ಕೆ ಮಾನವ ಬದುಕಿನ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಸಿ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರೇಮಚಂದ್ ಚವ್ಹಾಣ, ಡಾ.ಶಿವರಾಜ್ ಗೌನಳ್ಳಿ, ಬಸವರಾಜ ಗೋಣಿ, ಜಯಶ್ರೀ ನಿಗ್ಗುಡಗಿ, ಜ್ಯೋತಿ ಕಲ್ಲೂರು, ಭಾಗ್ಯವಂತಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.