ಲೋಕಸಭಾ ಚುನಾವಣೆ | ನಾಮಪತ್ರ ತಿರಸ್ಕಾರ ಆದೇಶ ಎತ್ತಿ ಹಿಡಿದ ಕಲಬುರಗಿ ಹೈಕೋರ್ಟ್ ಪೀಠ
ಮೊದಲ ಬಾರಿಗೆ ರಾತ್ರಿ ವೇಳೆ ತುರ್ತು ವಿಚಾರಣೆ ಮಾಡಿದ ಕಲಬುರಗಿ ಪೀಠ
ಕಲಬುರಗಿ : ಲೋಕಸಭಾ ಚುನಾವಣೆ ಉಮೇದುವಾರಿಗೆ ತಿರಸ್ಕಾರ ಪ್ರಶ್ನಿಸಿ ಅಭ್ಯರ್ಥಿಯು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ಪೀಠವು ಮಂಗಳವಾರ ರಾತ್ರಿ 10:30ರ ಸುಮಾರಿಗೆ ಕೈಗೆತ್ತಿಕೊಂಡು ವಿಚಾರಣೆ ನಡೆಸಿ, ತಿರಸ್ಕಾರ ಆದೇಶ ಎತ್ತಿ ಹಿಡಿದಿದೆ ಎಂದು ವರದಿಯಾಗಿದೆ.
ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ರವೀಂದ್ರ ಎಂಬವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಎ. 20 ರಂದು ರವಿವಾರ ತಿರಸ್ಕರಿಸಿದ್ದರು. ಈ ಬಗ್ಗೆ ಪ್ರಶ್ನಿಸಿ, ರವೀಂದ್ರ ಅವರು ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದರು. ರವಿವಾರ ಕಲಬುರಗಿ ಹೈಕೋರ್ಟ್ ಪೀಠಕ್ಕೆ ರಜಾದಿನವಾಗಿದ್ದರಿಂದ, ಸೋಮವಾರ ಎ.22 ರಂದು ವಿಚಾರಣೆ ಕೈಗೊಳ್ಳುವಂತೆ ಅಫಿವಿಟ್ ಸಲ್ಲಿಸಿದರು.
ಪ್ರಕರಣವನ್ನು ಎ.23ರಂದು ಮಂಗಳವಾರ ಸಂಜೆ 4 ಗಂಟೆಗೆ ವಿಚಾರಣೆಗೆತ್ತಿಕೊಂಡ ಕಲಬುರಗಿ ಹೈಕೋರ್ಟ್ ಪೀಠದ ಏಕಸದಸ್ಯ ಪೀಠವು ನಾಮಪತ್ರವನ್ನು ಅಂಗೀಕರಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಚುನಾವಣಾ ಆಯೋಗವು ಕಲಬುರಗಿ ಹೈಕೋರ್ಟ್ ಪೀಠದ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ರಾತ್ರಿ 10.30ರ ಸುಮಾರಿಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಚುನಾವಣಾಧಿಕಾರಿಗಳು ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಪಕ್ಷೇತರ ಅಭ್ಯರ್ಥಿ ರವೀಂದ್ರ ಅವರ ನಾಮಪತ್ರವನ್ನು ಕಲಬುರಗಿ ಹೈಕೋರ್ಟ್ ಪೀಠವು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.