50 ವರ್ಷಗಳಿಂದ ಪ್ರಜಾತಂತ್ರ , ಸಂವಿಧಾನ ಉಳಿಸಿರುವುದರಿಂದ ಮೋದಿ ಪ್ರಧಾನಿ, ಶಾ ಮಂತ್ರಿಯಾಗಿದ್ದಾರೆ : ಮಲ್ಲಿಕಾರ್ಜುನ್ ಖರ್ಗೆ
screengrab : x/@kharge
ಕಲಬುರಗಿ : ಪ್ರಧಾನಮಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಬೈಯುವುದೇ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೇಡಂ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡುತ್ತಿದ್ದ ಅವರು, "ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಮೋದಿ ವಿವರಿಸಲಿ" ಎಂದು ಹೇಳಿದರು.
"ಆರ್ಟಿಕಲ್ 371 (J) ಜಾರಿಗೆ ತರಲು 330 ಸದಸ್ಯರ ಬೆಂಬಲ ಬೇಕಾಗಿತ್ತು. ನಾನು ಎಲ್ಲ ಸದಸ್ಯರ ಮನೆಗೆ ವೈಯಕ್ತಿಕ ಭೇಟಿ ನೀಡಿ ಅವರ ಬೆಂಬಲ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ಅದು ಜಾರಿಯಾಗಿತ್ತು. ಈ ಪ್ರಮುಖ ಯೋಜನೆಯ ಜೊತೆಗೆ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐಸಿ, ಜವಳಿ ಪಾರ್ಕ್, ರೇಲ್ವೆ ಕೋಚ್ ಫ್ಯಾಕ್ಟರಿ ಮುಂತಾದ ಯೋಜನೆಗಳು ನಮ್ಮ ಕಾಲದಲ್ಲಿ ಆಗಿದ್ದವು. ಇಂತಹ ಯಾವುದಾದರೂ ಯೋಜನೆಯನ್ನು ಮೋದಿ ನಮ್ಮ ಜಿಲ್ಲೆಗೆ ಕೊಟ್ಟಿದ್ದರೆ ಹೇಳಲಿ" ಎಂದು ಸವಾಲು ಹಾಕಿದರು.
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಐದು ಪ್ರಮಖ ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ದೇಶದ ಪೂರ್ವ ಪಶ್ಷಿಮ ಹಾಗೂ ಉತ್ತರ ದಕ್ಷಿಣದವರೆಗೆ ಪಾದಯಾತ್ರೆ ಮಾಡಿ ಜನರ ಕಷ್ಟ ಅರಿತಿದ್ದಾರೆ"ಎಂದರು.
ನೀವು ಪ್ರಧಾನಿಯಾಗುತ್ತಿರಲಿಲ್ಲ
50 ವರ್ಷದಲ್ಲೇ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ. ಸ್ವತಂತ್ರ ನಂತರ ನೆಹರು ಅವರು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸದಿದ್ದರೆ ಹಾಗೂ ಅಂಬೇಡ್ಕರ್ ಸಂವಿಧಾನ ತರದಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ ಹಾಗೂ ಅಮಿತ್ ಶಾ ಗೃಹ ಸಚಿವನಾಗುತ್ತಿರಲಿಲ್ಲ ಎಂದು ಎಂದು ಹೇಳಿದರು.
"ನಾರಿ ನ್ಯಾಯ, ಯುವನ್ಯಾಯ, ರೈತನ್ಯಾಯ, ಶ್ರಮಿಕ್ ನ್ಯಾಯ, ಜಾತಿ ನ್ಯಾಯ ಎನ್ನುವ ನ್ಯಾಯಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದ್ದು, ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಮೋದಿ ಸುಳ್ಳಿನ ಸರದಾರ. ನಮ್ಮ ಪ್ರಣಾಳಿಕೆಯನ್ನು ಟೀಕಿಸಿ ಕಾಂಗ್ರೆಸ್ ಮಂಗಲಸೂತ್ರ ಕಿತ್ತುಕೊಳ್ಳುತ್ತದೆ ಹಾಗೂ ಸಂಪತ್ತನ್ನು ಸಮಾನವಾಗಿ ಹಂಚುತ್ತದೆ ಎಂದು ಸುಳು ಹೇಳುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಮೀಸಲಾತಿಯನ್ನು ರದ್ದುಗೊಳಿಸುತ್ತದೆ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ, "ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡಿ ಮೋದಿ ಸರ್ಕಾರವನ್ನು ಕೆಳಗೆ ಇಳಿಸಲು ಸಹಕರಿಸಿ" ಎಂದರು.
ಬಿಜೆಪಿ 400 ಸೀಟು ಗೆದ್ದಲ್ಲಿ ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸುತ್ತದೆ. ಹಾಗಾಗಿ, ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿ ಹುನ್ನಾರ ವಿಫಲಗೊಳಿಸಿ. ಕಳೆದ ಸಲ 28 ಬಿಜೆಪಿ ಸೀಟುಗಳನ್ನು ಗೆಲ್ಲಿಸಿದ್ದೀರಿ ಈ ಸಲ ಕಾಂಗ್ರೆಸ್ ನ 28 ಸೀಟು ಗೆಲ್ಲಿಸಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲ, ನಾಸೀರ್ ಹುಸೇನ್, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಯು.ಬಿ.ವೆಂಕಟೇಶ್ ಸೇರಿದಂತೆ ಹಲವರಿದ್ದರು.