ದೇಶದಲ್ಲಿ ಬಡ ಜನರಿಗೆ ಸವಲತ್ತುಗಳು ಸಿಗಬಾರದೆಂದು ಕೆಲವರಿಂದ ಷಡ್ಯಂತ್ರ : ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ : ದೇಶದಲ್ಲಿ ಬಡ ಜನರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಮತ್ತಿತರ ಸವಲತ್ತುಗಳು ಸಿಗಬಾರದು ಎಂದು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ , ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಷಾದ ವ್ಯಕ್ತಪಡಿಸಿದರು.
ಕಲಬುರಗಿಯ ಜಯದೇವ ಆಸ್ಪತ್ರೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಬಡ ಜನರಿಗೆ ಶಿಕ್ಷಣವನ್ನು ತಪ್ಪಿಸಬೇಕು, ಅವರಿಗೆ ಉತ್ತಮ ಸೌಲಭ್ಯಗಳು ಸಿಗಬಾರದು ಎಂಬ ಷಡ್ಯಂತ್ರ ನಡೆಯುತ್ತಿರುವುದು ಖೇದಕರ. ನಿಮಾನ್ಸ್ ಸಂಸ್ಥೆಯ ಕೇಂದ್ರ, ಡಯಾಬಿಟಾಲಜಿ ಘಟಕ ಮಾಡಬೇಕು, ಇದರಿಂದ ಇಲ್ಲಿನ ಜನರು ಬೆಂಗಳೂರು ಮತ್ತಿತರ ನಗರಗಳಿಗೆ ಹೋಗುವುದು ತಪ್ಪುತ್ತದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಬೇಕು ಎಂದರು.
ʼಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿವಿ ಆಗಿದೆ, ಇಲ್ಲಿ ಪ್ರೊಫೆಸರ್ ಇಲ್ಲ, ಹೊಸ ಕೋರ್ಸ್ ಇಲ್ಲ, ಸಂಶೋಧನೆ ಇಲ್ಲ, ಬಿಲ್ಡಿಂಗ್ ಕುಸಿಯುತ್ತಿವೆ, ಅನೇಕ ಕಟ್ಟಡಗಳು ಬಣ್ಣ ಸುಣ್ಣ ಇಲ್ಲ, ಇದಕ್ಕೆ ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿ ಅಭಿವೃದ್ಧಿ ಗೊಳಿಸಬೇಕುʼ ಎಂದು ಆಗ್ರಹಿಸಿದರು
ವಿವಿಯಲ್ಲಿ ನುರಿತ ಉಪನ್ಯಾಸಕರ ಕೊರತೆ ಇದೆ, ಒಳ್ಳೆಯ ಉಪನ್ಯಾಸಕರು ಇಲ್ಲಿಗೆ ಬರುತ್ತಿಲ್ಲ, ವಿವಿಗೆ ಪ್ರಾಧ್ಯಾಪಕರ ನೇಮಕಾತಿ ಮಾಡಿ, ಹೆಚ್ಚಿನ ಕೋರ್ಸ್ ಇರಬೇಕು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.