ಈಡಿ, ಸಿಬಿಐ ಕೇಸ್ಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು 1937ರಲ್ಲಿ ಜವಾಹರ್ ಲಾಲ್ ನೆಹರು ಅವರು ಸ್ಥಾಪಿಸಿ, ಜನರು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಲು ಪ್ರಯತ್ನಿಸಿದ್ದರು. ಅಂತಹ ಪತ್ರಿಕೆಯ ಮೇಲೆ ಈಡಿ ದಾಳಿ ನಡೆಸಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಕೇಸ್ ದಾಖಲಿಸಲು ನಿಮಗೆ ನಾಚಿಕೆಯಾಗಬೇಕು ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಕೌಶಲ್ಯಾಭಿವೃದ್ದಿ-ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಇದರ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಕೆಸಿಟಿ ಕಾಲೇಜು ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ( ಯುವ ಸಮೃದ್ದಿ ಸಮ್ಮೇಳನ) ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಿಮ್ಮ ʼಆರ್ಗನೈಸರ್ʼ ದೇಶದ ಜನರ ಒಗ್ಗಟ್ಟನ್ನು ಕೆಡಿಸುವ ಕೆಲಸ ಮಾಡುತ್ತಿದೆ. ಈಗ ವಕ್ಫ್ ಆಗಿದೆ. ಮುಂದೆ ಕ್ರಿಶ್ಚಿಯನ್ ಸಮುದಾಯದ 7 ಕೋಟಿ ಹೆಕ್ಟರ್ ಜಮೀನಿನ ಮೇಲೆ ಕಣ್ಣು ಬಿದ್ದಿದೆ ಎಂದು ʼಆರ್ಗನೈಸರ್ʼ ಬರೆದಿದೆ. ಆದರೆ ಇತ್ತೀಚಿಗೆ ಆ ಮಾತನ್ನು ವಾಪಸ್ ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಇತ್ತೀಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಿದ್ದಾರೆ. ಕಾಂಗ್ರೆಸ್ ಬಾಬಾ ಸಾಹೇಬರನ್ನು ಅಪಮಾನಿಸಿದೆ ಎಂದು ಆರೋಪಿಸಿದ್ದಾರೆ. ಆದರೆ ನಾವು ಸಂವಿಧಾನ ರಚನೆ ಮಾಡುವ ಜವಾಬ್ದಾರಿ ಕೊಟ್ಟಿದ್ದೆವು ಎಂದರು.
ದೇಶ ಒಡೆಯುವ ಪ್ರಯತ್ನಗಳಿಂದ ಹಾಗೂ ಈಡಿಯಿಂದ ಕೇಸ್ ದಾಖಲಿಸಿ ಕಾಂಗ್ರೆಸ್ ಪಕ್ಷವನ್ನು ಬಗ್ಗಿಸುವ ಪ್ರಯತ್ನ ಮಾಡಿದರೆ ನಾವು ಮಣಿಯುವುದಿಲ್ಲ. ಗಾಂಧಿ ಕುಟುಂಬದಲ್ಲಿ ಎರಡು ಜೀವ ಹೋಗಿವೆ. ಆದರೆ ಹೆದರಿಲ್ಲ, ನಿಮ್ಮ ಈಡಿ- ಸಿಬಿಐ ಕೇಸ್ಗಳಿಗೆ ಹೆದರುವುದಿಲ್ಲ ಎಂದು ಗುಡುಗಿದರು.
ಮೋದಿ- ಶಾ ನಿಮ್ಮನ್ನು ಹೆದರಿಸುತ್ತಾರೆ :
ಜನರು ನಿಮಗೆ ಆಶೀರ್ವಾದ ಮಾಡಿ ರಾಜ್ಯದಲ್ಲಿ ಅಧಿಕಾರದಲ್ಲಿ ಕೂಡಿಸಿದ್ದಾರೆ. ನಿಮ್ಮಲ್ಲಿ ಏನೇ ಬೇಧ-ಬಾವ ಇರಲಿ, ನೀವು ಒಂದಾಗಿರಬೇಕು, ಜಾಗೃತರಾಗಿರಬೇಕು. ಇಲ್ಲದಿದ್ದರೆ ಮೋದಿ- ಶಾ ನಿಮ್ಮ ಮೇಲೆ ದಾಳಿ ಮಾಡುತ್ತಾರೆ. ನಿಮ್ಮನ್ನು ಹೆದರಿಸುತ್ತಾರೆ ಎಂದು ರಾಜ್ಯ ಸರಕಾರಕ್ಕೆ ಕಿವಿ ಮಾತು ಹೇಳಿದರು.
ಪ್ರಧಾನಿ ಮೋದಿಯಿಂದ ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯ :
ಪ್ರಧಾನಿ ಮೋದಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನೂ ಒಳ್ಳೆಯದು ಮಾಡಿಲ್ಲ, ಮಾಡುವುದೂ ಇಲ್ಲ. ಕಡೇಚೂರಿನಲ್ಲಿ ರೈಲು ಭೋಗಿ ಕಾರ್ಖಾನೆ ತಂದಿದ್ದೇವೆ. ಜಾಗ, ನೀರು, ವಿದ್ಯುತ್ ಪುಕ್ಕಟೆಯಾಗಿ ಕೊಟ್ಟಿದ್ದೇವೆ. ಆದರೆ ಮೋದಿ ಅನುದಾನ ಬಿಡುಗಡೆ ಮಾಡಿ ಅಲ್ಲಿ ಕೈಗಾರಿಕೆಗಳ ಅಭಿವೃದ್ದಿ ಯಾಕೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀನಿವಾಸ ಸರಡಗಿ ಗ್ರಾಮದ ಜನರು ಒಪ್ಪಿಗೆ ಮೇಲೆ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಜಮೀನು ಕೊಟ್ಟಿದ್ದಾರೆ. ಈಗ ನೋಡಿದರೆ ಇಲ್ಲಿ ವಿಮಾನಗಳೇ ಬರುತ್ತಿಲ್ಲ. ವಿಮಾನ ನಿಲ್ದಾಣ ನಮ್ಮ ಸ್ಥಳೀಯ ರೈತರು ಜಾಗ ಕೊಟ್ಟಿದ್ದರಿಂದ ನಿರ್ಮಾಣವಾಗಿದೆ. ಇಲ್ಲಿ ನಿರಂತರ ವಿಮಾನ ಸೇವೆ ಒದಗಿಸಲು ಮೋದಿ ಮನಸು ಮಾಡಲಿ ಎಂದರು.
ಉದ್ಯೋಗ ಮೇಳ ಆಯೋಜಿಸಿರುವುದು ರಾಜ್ಯಕ್ಕೆ ಹಾಗೂ ದೇಶಕ್ಕೆ ಒಳ್ಳೆಯದು. ಕಾರ್ಖಾನೆಗಳು ಯುವಕರಿಗೆ ಕೌಶಲ್ಯ ಹೆಚ್ಚಿಸಲು ತರಬೇತಿ ನೀಡಬೇಕು. ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಕೇಂದ್ರಗಳಿವೆ. ಯುವಕರು ಅಲ್ಲಿ ತರಬೇತಿ ಪಡೆದುಕೊಳ್ಳಬೇಕು. ಹಾಗಾಗಿ ಅಂತಹ ಯುವಕರು ಕೇವಲ ಪದವಿ ಓದಿದರೆ ಮಾತ್ರ ಕೆಲಸ ಸಿಗುವುದಿಲ್ಲ. ಅದರ ಜೊತೆಗೆ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ದಿ ಹೆಚ್ಚಿಸುವ ತರಬೇತಿ ಹೊಂದಿದಾಗ ಮಾತ್ರ ಕೆಲಸ ಸಿಗುತ್ತವೆ. ಅಂತಹ ತರಬೇತಿ ಕೇಂದ್ರಗಳನ್ನು ಕಾಂಗ್ರೆಸ್ ಅವಧಿಯಲ್ಲಿ ತೆರೆಯಲಾಗಿತ್ತೇ ಹೊರತು ಮೋದಿ ಅವಧಿಯಲ್ಲಿ ಅಲ್ಲ ಎಂದು ಕುಟುಕಿದರು.