ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಚರ್ಚೆಗೆ ಬರುವಂತೆ ಮೋದಿಗೆ ಪತ್ರ: ಮಲ್ಲಿಕಾರ್ಜುನ ಖರ್ಗೆ
Photo: PTI
ಕಲಬುರಗಿ, ಎ.24: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ಸಿ , ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್ ಸಿದ್ಧಾಂತದಂತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಅವರಿಗೆ ಪತ್ರ ಬರೆದಿದ್ದೇನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ..
ಅಝ್ಝಲಪುರ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣರ ಪರ ಮತ ಯಾಚಿಸಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ನಾಚಿಕೆಯಾಗಬೇಕು ಅವರಿಗೆ. ಎಂತಹ ಪ್ರಧಾನಿ ಇವರು? ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಹೊರತು ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಪ್ರತ್ಯುತ್ತರ ನೀಡಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹೇಳಿದ್ದೇವೆ. ಆದರೆ ಆ ಬಗ್ಗೆ ಟೀಕಿಸಿದ್ದಾರೆ. ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತ ಪತ್ರ ಬರೆದಿದ್ದೇನೆ. ನೋಡೋಣ ಅವರು ಬಂದರೆ ನಾನು ಚರ್ಚೆ ಮಾಡುತ್ತೇನೆ ಎಂದರು.
ಮೋದಿ ಹಾಗೂ ಅಮಿತ್ ಶಾ ಮಾರುವವರಿದ್ದರೆ ಅಂಬಾನಿ ಹಾಗೂ ಅದಾನಿ ಕೊಳ್ಳುವವರಿದ್ದಾರೆ ಎಂದು ಟೀಕಿಸಿದ ಖರ್ಗೆ,
ದುರ್ದೈವದಿಂದಾಗಿ ಕಳೆದ ಸಲ ನನಗೆ ಹಿನ್ನೆಡೆಯಾಯಿತು. ಇದರಿಂದ ತಾಪತ್ರಯ ಆಗಿತ್ತು. ಆದದ್ದು ಆಗಿ ಹೋಗಿದೆ. ಅದನ್ನೇ ಪದೇ ಪದೇ ಹೇಳಿದರೂ ಚೆನ್ನಾಗಿರುವುದಿಲ್ಲ. ಕಳೆದ ಸಲದ ಸೋಲಿನಿಂದ ಹೊರಗೆ ಬನ್ನಿ. ಈ ಸಲ ನೀವೆಲ್ಲ ಸೇರಿ ಬಿಜೆಪಿಗೆ ಮುಖಭಂಗ ಮಾಡಿ. ಇದು ಮೋದಿಗೂ ಗೊತ್ತಾಗಲಿ ಎಂದು ಮನವಿ ಮಾಡಿದರು.
ನಾನು ರಾಜಕೀಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ ಎಂದು ಘೋಷಿಸಿದ ಖರ್ಗೆ ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರೆಸ್ಸೆಸ್ ಸಿದ್ಧಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ಕಳೆದ ಸಲದ ಸೋಲಿನ ವಿಚಾರ ಬಿಡಿ. ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ ರಾಧಾಕೃಷ್ಣರನ್ನು ಗೆಲ್ಲಿಸಬೇಕು ಎಂದರು.
ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಮತದಾರರು ಆಶೀರ್ವಾದ ಮಾಡಿ ದಿಲ್ಲಿಗೆ ಕಳಿಸಿದರೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು,
ಶಾಸಕರಾದ ಅಲ್ಲಮಪ್ರಭು, ಎಂ.ವೈ.ಪಾಟೀಲ್, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು ಮಾತನಾಡಿದರು.
ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಡಿಸಿಸಿ ಜಗದೇವ ಗುತ್ತೇದಾರ್, ಶರಣಪ್ಪ ಮಟ್ಟೂರ, ಅರುಣಕುಮಾರ ಪಾಟೀಲ್, ರಿತೀಶ್ ಗುತ್ತೇದಾರ್,ಜೆ.ಎಂ.ಕೊರಬು, ಪಪ್ಪು ಪಟೇಲ್, ಸಿದ್ದು ಸಿರಸಗಿ,ಮತೀನ ಪಟೇಲ್, ರಾಜೇಂದ್ರ ಪಾಟೀಲ್ ರೇವೂರ, ಪ್ರಕಾಶ್ ಜಮಾದಾರ, ಸಿದ್ಧಾರ್ಥ್ ಬಸರಿಗಿಡ, ಭೀಮಾಶಂಕರ ಹೊನ್ನಕೇರಿ, ಚಂದಪ್ಪ ಕರಜಗಿ, ರಮೇಶ್ ಪೂಜಾರಿ, ಮಕ್ಬೂಲ್ ಪಟೇಲ್, ಶರಣು ಕುಂಬಾರ, ಅಸ್ಪಕ್ ಬಂದರವಾಡ, ಅಂಬರೀಷ್ ಬುರಲಿ, ಶಿವಾನಂದ ಗಾಡಿಸಾಹುಕಾರ, ರೇಣುಕಾ ಸಿಂಗೆ, ದಯಾನಂದ ದೊಡ್ಮನಿ, ಲಚ್ಚಪ್ಪ ಜಮಾದಾರ, ಅರವಿಂದ್ ಗುತ್ತೇದಾರ್ ಸೇರಿದಂತೆ ಮತ್ತಿತರಿದ್ದರು