ನವೋದ್ಯಮಿಗಳೊಂದಿಗೆ ಸಭೆ | ತಿಂಗಳೊಳಗೆ ಕಲಬುರಗಿಯಲ್ಲಿ ಇನ್ಕ್ಯುಬೇಶನ್ ಸೆಂಟರ್ ಆರಂಭ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಐ.ಟಿ. ನವೋದ್ಯಮಗಳಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಹೆಚ್ಚಿನ ಮೂಲಸೌಕರ್ಯ ಮತ್ತು ತಾಂತ್ರಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಇನ್ಕ್ಯುಬೇಶನ್ ಸೆಂಟರ್ ಸ್ಥಾಪಿಸಲು ನಿರ್ಧರಿಸಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಇಂಜಿನೀಯರಿಂಗ್ ಕಾಲೇಜು, ವಿಜ್ಞಾನ ಪದವಿ ಕಾಲೇಜು ಹಾಗೂ ನವೋದ್ಯಮಿಗಳೊಂದಿಗೆ ಸಭೆ ನಡೆಸಿದ ಅವರು, ಇಂಜಿನೀಯರ್ ಕಾಲೇಜಿನವರು ನಗರದಲ್ಲಿ ಸುಮಾರು 5,000 ಚದುರ ಅಡಿ ಅಳತೆಯ ಸುಸಜ್ಜಿತ ಕಟ್ಟಡ ನೀಡಿದಲ್ಲಿ ಕೂಡಲೆ ಸೆಂಟರ್ ಆರಂಭಿಸಲಾಗುವುದು. ಇದಕ್ಕಾಗಿ ಎಲ್ಲಾ ನವೋದ್ಯಮಿಗಳು ಸಭೆ ಸೇರಿ ತಮಗೆ ಬೇಕಾದ ಮೂಲಸೌಕರ್ಯ ಮತ್ತು ತಾಂತ್ರಿಕ ಸಹಾಯದ ಬೇಡಿಕೆಯನ್ನು ನೀಲಿನಕ್ಷೆ ರೂಪದಲ್ಲಿ ಸಿದ್ದಪಡಿಸಿ ನೀಡಿದಲ್ಲಿ ಅದನ್ನು ಪೂರೈಸಲಾಗುವುದು ಎಂದರು.
ನವೋದ್ಯಮಗಳನ್ನು ಪೋಷಿಸಲು ಮತ್ತು ಕೈಗಾರಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನುರಿತ ಉದ್ಯೋಗಿಗಳನ್ನು ಸೃಷ್ಟಿಸುವ ಗುರಿಯನ್ನು ಈ ಕೇಂದ್ರ ಹೊಂದಲಿದೆ. ಅತ್ಯಾಧುನಿಕ ಮೂಲಸೌಕರ್ಯ, ತಜ್ಞರ ಮಾರ್ಗದರ್ಶನ ಮತ್ತು ಉದ್ಯಮದ ಸಹಭಾಗಿತ್ವದೊಂದಿಗೆ, ಉದ್ದೇಶಿತ ಕೇಂದ್ರವು ಉದ್ಯಮಿಗಳನ್ನು ಸಶಕ್ತಗೊಳಿಸುತ್ತದೆ ಮತ್ತು ನುರಿತ ಪ್ರತಿಭಾವಂತ ಉದ್ಯೋಗಿಗಳ ಗುಂಪನ್ನು ರೂಪಿಸಲಿದ್ದು, ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲಿದೆ ಎಂದರು.
ಐ.ಟಿ.-ಬಿ.ಟಿ ಬೆಳವಣಿಗೆ ಕುರಿತು ಹೆಸರಾಂತ, ಕಾರ್ಪೋರೇಟ್ ಜಗತ್ತಿನ ತಜ್ಞರನ್ನು ಕರೆಸಿ ಕಾನ್ಕ್ಲೇವ್, ತರಬೇತಿ, ಕಾರ್ಯಾಗಾರ ಹೀಗೆ ನಾನಾ ರೀತಿಯ ಚಟುವಟಿಕೆಗಳು ಕೇಂದ್ರದ ಮೂಲಕ ಹಾಕಿಕೊಳ್ಳಬಹುದಾಗಿದೆ. ಸರಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದ ಸಚಿವರು, ಜಿಲ್ಲೆಯಲ್ಲಿ ಅಂದಾಜು 90 ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 300 ಸ್ಟಾರ್ಟ್ ಅಪ್ ಕಂಪನಿಗಳು ನೊಂದಾಯಿಸಿಕೊಂಡಿವೆ ಎಂದರು.
ನಿಪುಣ ಕರ್ನಾಟಕ ದೇಶಕ್ಕೆ ಮಾದರಿ :
ಕರ್ನಾಟಕ ಯುವ ಜನರಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ಪ್ರಮುಖ ಐ.ಟಿ. ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿ ಉದ್ಯೋಗಾಧಾರಿತ ಕೌಶಲ್ಯ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ದೇಶದಲ್ಲಿಯೇ ಮಾದರಿಯಾಗಿ “ನಿಪುಣ ಕರ್ನಾಟಕ” ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಇದೂವರೆಗೆ ಈ ಭಾಗದಿಂದ 20 ಸಾವಿರ ಸೇರಿ 1 ಲಕ್ಷ ಯುವ ಜನ ಅತ್ಯಾಧುನಿಕ ಕೌಶಲ್ಯ ಪಡೆಯಲು ಉತ್ಸುಕರಾಗಿ ನೊಂದಾಯಿಸಿಕೊಂಡಿದ್ದಾರೆ ಎಂದರು.
ವಿಶೇಷವಾಗಿ ಇಂಜಿನೀಯರಿಂಗ್, ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ರೂಪಿಸಿರುವ ಈ ಯೋಜನೆಗೆ ರಾಜ್ಯ ಸರಕಾರ 300 ಕೋಟಿ ರೂ. ಖರ್ಚು ಮಾಡಲಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬಯೋ ಮೆಕ್ಯಾನಿಕ್, ಡೇಟಾ ಅನಾಲಿಟಿಕ್ಸ್, ಬ್ಲಾಕ್ ಚೈನ್, ಮ್ಯಾನುಫ್ಯಾಕ್ಚರ್, ಮಶೀನ್ ಲರ್ನಿಂಗ್, ನ್ಯಾಚುರಲ್ ಮಾಡ್ಯೂಲ್, ಸೈಬರ್ ಸೆಕ್ಯೂರಿಟಿ ಹೀಗೆ ನಾನಾ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಯುವಕ-ಯುವತಿಯರಿಗೆ ನೀಡಿ ಅವರನ್ನು ಉದ್ಯೋಗ ಪಡೆಯಲು ಸಶಕ್ತರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ಪ್ರಸ್ತುತ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಹಳೆ ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೂ ಈ ಯೋಜನೆಯಡಿ ತರಬೇತಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ನಡೆದ ಸಂವಾದದಲ್ಲಿ ಜಿಲ್ಲೆಯ ಯುವ ನವೋದ್ಯಮಿಗಳು, ಕಾಲೇಜಿನ ಪ್ರಾಂಶುಪಾಲರು, ಇಂಜಿನೀಯರಿಂಗ್ ಕಾಲೇಜು ಮುಖ್ಯಸ್ಥರು ಈ ಭಾಗದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಕೊರತೆ ನೀಗಿಸುವ, ಸಂವಹನ ವೃದ್ಧಿ, ಭಾಷೆ ಮೇಲೆ ಪ್ರಬುಧ್ಧ ಸಾಧಿಸುವ ನಿಟ್ಟಿನಲ್ಲಿ ಅನೇಕ ಸಲಹೆ ನೀಡಿದರು.
ಸಭೆಯಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಉಪ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳಿಧರ ರತ್ನಗಿರಿ ಇದ್ದರು.