ಜೆಸ್ಕಾಂ ವ್ಯಾಪ್ತಿಯ 10 ಸಬ್ ಸ್ಟೇಷನ್‌ನಲ್ಲಿ 43 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಘಟಕ ಸ್ಥಾಪನೆ: ಸಚಿವ ಕೆ.ಜೆ. ಜಾರ್ಜ್
ಕಲಬುರಗಿಜಿಲ್ಲೆಯ ಶಾಸಕರೊಂದಿಗೆ ವಿದ್ಯುತ್ ಸಮಸ್ಯೆ ಕುರಿತ ಸಭೆ

ಕಲಬುರಗಿ: ವಿದ್ಯುತ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 10 ವಿದ್ಯುತ್ ಉಪ ವಿತರಣಾ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಕುಸುಮ್ ‘ಸಿ’ ಯೋಜನೆಯಡಿ 43 ಮೆಗಾ ವ್ಯಾಟ್ ಸೋಲಾರ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಗುರುವಾರ ಇಲ್ಲಿನ ಜೆಸ್ಕಾಂನ ನಿಗಮ ಕಚೇರಿ ಸಭಾಂಗಣದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಜಿಲ್ಲೆಯ ಶಾಸಕರು ಮತ್ತು ಜೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯ ಹಡಗಿಲ್ ಹಾರುತಿ, ವಿ.ಕೆ.ಸಲಗರ್ ಹಾಗೂ ಗೊಬ್ಬೂರ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಸೋಲಾರ ಘಟಕ ಸ್ಥಾಪಿಸಲಾಗುತ್ತಿದೆ. ಖಾಸಗಿ ಕಂಪನಿಗಳೆ ಸೋಲಾರ ಘಟಕ ಸ್ಥಾಪನೆಗೆ ಬಂಡವಾಳ ಹಾಕಲಿದ್ದು, ಸರ್ಕಾರ ಯಾವುದೇ ಹಣ ಖರ್ಚು ಮಾಡಲ್ಲ. 2.95 ರೂ. ದರದಲ್ಲಿ ಪ್ರತಿ ಯೂನಿಟ್ ವಿದ್ಯುತ್ ಅವರಿಂದ ಖರೀದಿಸಿ ಘಟಕ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯ 4,456 ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತದೆ ಎಂದರು.
ರಾಜ್ಯದಾದ್ಯಂತ ಈ ಯೋಜನೆಯಡಿ 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದ್ದು, 1 ಮೆಗಾ ವ್ಯಾಟ್ ಘಟಕಕ್ಕೆ 4 ಎಕರೆ ಜಮೀನು ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರಿ ಜಮೀನು ಉಚಿತವಾಗಿ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಲೀಸ್ ಪಡೆದು ಯೋಜನೆ ಸಾಕಾರಗೊಳಿಸಲಾಗುವುದು ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲಬುರಗಿ ನಗರದಲ್ಲಿ ಒಂದು ಹೆಚ್ಚುವರಿ ಸಬ್ ಸ್ಟೇಷನ್ ಜೊತೆಗೆ ಪಟ್ಟಣ ಹೋಬಳಿಯಲ್ಲಿ ಒಂದು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಬೇಕಿದೆ. ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ವಿದ್ಯುತ್ ಲೈನ್ ತಲೆ ಮೇಲೆ ನೇತಾಡುತ್ತಿದ್ದು, ಅವುಗಳನ್ನು ಭೂಗತ ಕೇಬಲ್ (ಅಂಡರ್ ಗ್ರೌಂಡ್) ಅಳವಡಿಸಬೇಕೆಂದರು. ಸಚಿವ ಕೆ.ಜೆ.ಜಾರ್ಜ್ ಮಾತನಾಡಿ ಅದು ಜನನಿಬಿಡಿತ ಪ್ರದೇಶ ಆಗಿರುವುದರಿಂದ ಭೂಗತ ಕೇಬಲ್ ಅಳವಡಿಸುವಂತೆ ಎಂ.ಡಿ. ರವೀಂದ್ರ ಅವರಿಗೆ ಸೂಚಿಸಿದರು.
ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ ಕ್ಷೇತ್ರದ ಹರಕಂಚಿ, ಶ್ರೀಚಂದ ಸೇರಿದಂತೆ ಹಲವೆಡೆ ಟಿ.ಸಿ. ಕೆಟ್ಟಲ್ಲಿ ಎರಡು ತಿಂಗಳಾದರು ಬದಲಾಯಿಸುತ್ತಿಲ್ಲ. ರೈತರ ಸಮಸ್ಯೆಗೆ ಜೆಸ್ಕಾಂ ತ್ವರಿತರಗತಿಯಲ್ಲಿ ಸ್ಪಂದಿಸಬೇಕು. ಕಮಲಾಪೂರ, ನರೋಣಾ 33 ಕೆ.ವಿ. ಸ್ಟೇಷನ್‌ಗಳನ್ನು 110 ಕೆ.ವಿ.ಗೆ ಮೇಲ್ದರ್ಜೇಗೇರಿಸಬೇಕೆಂದರು. ಕೆ.ಪಿ.ಟಿ.ಸಿ.ಎಲ್. ಎಂ.ಡಿ ಮತ್ತು ಜೆಸ್ಕಾಂ ಚೇರಮೆನ್ ಪಂಕಜಕುಮಾರ ಪಾಂಡೆ ಮಾತನಾಡಿ ಕಮಲಾಪೂರ ತಾಲೂಕಾ ಕೇಂದ್ರಸ್ಥಾನವಾಗಿರುವುದರಿಂದ ವಿದ್ಯುತ್ ಲೋಡ್ ಬೆಳವಣಿಗೆ ಪರಿಗಣಿಸಿ ಉನ್ನತಿಕರೀಸಲಾಗುವುದು ಎಂದರು.
ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಮಾತನಾಡಿ ಕ್ಷೇತ್ರದ ಶಿವೂರ, ನಂದರ್ಗಾ, ಘೋಳನೂರ, ಅತನುರ, ಬಳ್ಳೂರ್ಗಿ 33.ಕೆ.ವಿ ವಿದ್ಯುತ್ ಉಪ ವಿತರಣಾ ಕೇಂದ್ರಗಳನ್ನು 110 ಕೆ.ವಿ.ಗೆ ಉನ್ನತಿಕರಿಸುವಂತೆ ಕೋರಿದರು. ಬುಧವಾರ ನಡೆದ ಸಭೆಯಲ್ಲಿ ಅಫಜಲಪೂರ ಪಟ್ಟಣಕ್ಕೆ ಹೊಸದಾಗಿ 220 ಕೆ.ವಿ. ಸಬ್ ಸ್ಟೇಷನ್ ಮಂಜೂರು ಮಾಡಲಾಗಿದೆ. ಉಳಿದ ಪ್ರಸ್ತಾವನೆ ಪರಿಶೀಲಿಸಲಾಗುವುದು ಎಂದು ಪಂಕಜಕುಮಾರ ಪಾಂಡೆ ತಿಳಿಸಿದರು.
ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಅವರು ವಿವಿಧ ವಿದ್ಯುತ್ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. ಶಾಸಕ ಜಗದೇವ ಗುತ್ತೇದಾರ ಮಾತನಾಡಿ ನೂತನ ಕಾಳಗಿ ತಾಲೂಕಿನಲ್ಲಿ 33ಕೆ.ವಿ. ಸ್ಟೇಷನ್ 110 ಕೆ.ವಿ.ಗೆ ಮೇಲ್ದರ್ಜೇಗೇರಿಸುವಂತೆ ಮನವಿ ಮಾಡಿಕೊಂಡರು.
ಎಂ.ಎಲ್.ಸಿ ಬಿ.ಜಿ.ಪಾಟೀಲ ಮಾತನಾಡಿ ಫಿರೋಜಾಬಾದ ಬಳಿ ಕ್ರೆಡಲ್ ಸಂಸ್ಥೆಯಿಂದ 1,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಸ್ಥಾಪಿಸುವ ಕೆಲಸ ಎರಡು ವರ್ಷದಿಂದ ನೆನೆಗುದ್ದಿಗೆ ಬಿದ್ದಿದ್ದು, ಅನುಷ್ಟಾನಕ್ಕೆ ತರಬೇಕೆಂದರು. ಕೆ.ಇ.ಆರ್.ಸಿ. ಅವರು ಬ್ಯಾಟರಿ ಸ್ಟೋರೇಜ್ ಕ್ಯಾಪಾಸಿಟಿ ಅಳವಡಿಸಿಕೊಂಡು ಪ್ರಸ್ತಾವನೆ ಮರು ಸಲ್ಲಿಸಲು ತಿಳಿಸಿರುವುದರಿಂದ ವಿಳಂಬವಾಗಿದೆ ಎಂದು ಸಚಿವರು ಉತ್ತರಿಸಿದರು.
ಲೈನ್ ನಿರ್ವಹಣೆ ಮಾಡಿ, ಅವಘಡ ತಪ್ಪಿಸಿ:
ಸಭೆಯ ಚರ್ಚೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ ತಮ್ಮ ಕ್ಷೇತ್ರದ ಹಲವೆಡೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಲೈನ್ ಕೆಳಗೆ ಇಳಿಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟಿದ್ದು, ನಿರ್ವಹಣೆ ಕೆಲಸ ನಿರಂತರ ನಡೆಯಬೇಕು ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಕೆ.ಜೆ.ಜಾರ್ಜ್ ಅವರು ಕೂಡಲೆ ಜಿಲ್ಲೆಯ ಎಲ್ಲೆಡೆ 2-3 ತಿಂಗಳಿನಲ್ಲಿ ವಿದ್ಯುತ್ ಲೈನ್ ನಿರ್ವಹಣೆ ಮತ್ತು ಕಂಬಗಳನ್ನು ಸರಿಪಡಿಸುವ ಕೆಲಸ ಪೂರ್ಣಗೊಳಿಸಬೇಕು. ವಿದ್ಯುತ್ ಅವಘಡ ಆದಮೇಲೆ ಪರಿಹಾರ ನೀಡುವುದು ಮುಖ್ಯವಲ್ಲ, ಅವಘಡ ತಪ್ಪಿಸುವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕತೆ ಇದೆ ಎಂದು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದಲ್ಲದೆ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಬೇಕೆಂದು ಸೂಚಿಸಿದರು.
ಜೆಸ್ಕಾಂನಿಂದ ಗರಿಷ್ಠ ಪರಿಹಾರ:
ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಎರಡು ಕಾಲು ಕಳೆದುಕೊಂಡು ನಗರದ ಯೂನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಗೆ ಜೆಸ್ಕಾಂ 1 ಲಕ್ಷ ರೂ. ಪರಿಹಾರ ನೀಡಿದೆ. ಇಬ್ಬರು ಬುದ್ದಿ ಮಾಂದ್ಯ ಮಕ್ಕಳನ್ನು ಹೊಂದಿರುವ ಸಂತ್ರಸ್ತೆಯ ಇದೂವರೆಗಿನ ಆಸ್ಪತ್ರೆ ವೆಚ್ಚ 12 ಲಕ್ಷ ರೂ. ಆಗಿದ್ದು, ಚಿಕಿತ್ಸೆ ಮುಂದುವರೆದಿದೆ. ಹೀಗಾಗಿ ಆಸ್ಪತ್ರೆ ವೆಚ್ಚ ಜೆಸ್ಕಾಂನಿಂದ ಭರಿಸುವುದಲ್ಲದೆ ಕುಟುಂಬಕ್ಕೆ ಎಲ್ಲಾ ರೀತಿಯ ಪರಿಹಾರ ಒದಗಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಸಚಿವರ ಗಮನ ಸೆಳೆದರು. ಇದಕ್ಕೆ ಸಚಿವರು ಸಮ್ಮತ್ತಿಸಿ ಜೆಸ್ಕಾಂನಿಂದ ಗರಿಷ್ಠ ಪರಿಹಾರ ಒದಗಿಸುವ ಭರವಸೆ ನೀಡಿದರು.
ಸಭೆಯಲ್ಲಿ ಜೆಸ್ಕಾಂ ಮುಖ್ಯ ಇಂಜಿನೀಯರ್ (ಕಾರ್ಯಾಚರಣೆ) ಆರ್.ವೆಂಕಟೇಶ ಪ್ರಸಾದ, ಕಲಬುರಗಿ ವಲಯದ ಮುಖ್ಯ ಇಂಜಿನೀಯರ್ ವೆಂಕಟೇಶ ಹಾಲ್ವಿ, ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಕಲಬುರಗಿ ಮತ್ತು ಯಾದಗಿರಿ ಅಧೀಕ್ಷಕ ಅಭಿಯಂತರರಾದ ಖಂಡೆಪ್ಪ ಸೋನಾವಣೆ ಸೇರಿದಂತೆ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರ್ ಗಳು ಹಾಗೂ ಇತರೆ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.