ಬಿಜೆಪಿ ಎಲ್ಲಿ ಬಲಹೀನವಾಗಿದೆಯೋ, ಅಲ್ಲಲ್ಲಿ ರಾಜಭವನದ ದುರುಪಯೋಗ : ಪ್ರಿಯಾಂಕ್ ಖರ್ಗೆ
"ರಾಜ್ಯಪಾಲರ ಕಚೇರಿ ಬಿಜೆಪಿಯ ಪ್ರಾದೇಶಿಕ ಕಚೇರಿಯಾಗಿ ಮಾರ್ಪಟ್ಟಿದೆ"
ಕಲಬುರಗಿ: ಮುಡಾ ಪ್ರಕರಣ ಸಂಬಂಧದ ಆರೋಪಗಳು ರಾಜಕೀಯ ದುರುದ್ದೇಶದಿಂದ ಮಾಡಲಾಗುತ್ತಿದೆ. ರಾಜ್ಯಪಾಲರ ಕಚೇರಿ ಬಿಜೆಪಿಯ ಪ್ರಾದೇಶಿಕ ಕಚೇರಿಯಾಗಿ ಮಾರ್ಪಟ್ಟಿದೆ. ಎಲ್ಲೆಲ್ಲಿ ಬಿಜೆಪಿ ಬಲಹೀನವಾಗಿದೆ, ಅಲ್ಲಲ್ಲಿ ರಾಜಭವನದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಕೇರಳದಲ್ಲಿ ಏನು ನಡೆಯುತ್ತಿದೆ?. ತಮಿಳುನಾಡು ರಾಜ್ಯಪಾಲರು ತಮ್ಮದೇ ಸಭೆಯಿಂದ ಹೊರನಡೆಯುತ್ತಿದ್ದಾರೆ. ಕೇರಳ ರಾಜ್ಯಪಾಲರು ಸರಕಾರದ ವಿರುದ್ದವೇ ಸತ್ಯಾಗ್ರಹ ಕೂರುತ್ತಾರೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.
ರಾಜಭವನ ದುರಪಯೋಗ :
ಜು.5ರಂದು ಸಿಎಂಗೆ ರಾಜ್ಯಪಾಲರು ಪತ್ರ ಬರೆಯುತ್ತಾರೆ. ಮತ್ತೆ 15ನೇ ತಾರೀಖಿಗೆ ಮತ್ತೊಂದು ಪತ್ರ ಬರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಈ ಬಗ್ಗೆ ಸರಕಾರ ಜು.26ರಂದು ನೂರು ಪುಟಗಳ ಉತ್ತರ ಸಲ್ಲಿಸಿದೆ. ಅದೇ ದಿನ ಅಬ್ರಹಂ ಎಂಬವರು ದೂರು ದಾಖಲಿಸಿದ ಕೂಡಲೇ ರಾಜ್ಯಪಾಲರು ಸಿಎಂಗೆ ನೋಟಿಸ್ ಕೊಡುತ್ತಾರೆ. ಸರಕಾರದ ಉತ್ತರವನ್ನು ಕೂಡಾ ಪರಿಶೀಲನೆ ನಡೆಸದೆ, ಕೇವಲ ಖಾಸಗಿ ದೂರು ದಾಖಲಿಸಿದ್ದ ತಕ್ಷಣ ಶೋಕಾಸ್ ನೋಟಿಸ್ ನೀಡಲಾಗಿದೆ. ದೂರದಾರರ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ, ಪ್ರಕರಣವೊಂದರಲ್ಲಿಅವರಿಗೆ ಸುಪ್ರಿಂ ಕೋರ್ಟ್ ದಂಡ ಹಾಕಿದೆ. ಅಂತವರ ಮಾತು ರಾಜ್ಯಪಾಲರು ಕೇಳುತ್ತಾರೆ ಎಂದರೆ ಮೇಲಿನಿಂದ ಅವರಿಗೆ ಆದೇಶ ಬಂದಿದೆ. ರಾಜ್ಯಪಾಲರು ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರಾಜಭವನ ದುರಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ತುಂಗಭದ್ರಾ ಆಣೆಕಟ್ಟು ; ಅಗತ್ಯ ಕ್ರಮ :
ತುಂಗಭದ್ರಾ ಆಣೆಕಟ್ಟು ಗೇಟ್ ಕೊಚ್ಚಿ ಹೋದ ಪ್ರಕರಣ ಹಿನ್ನೆಲೆಯಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು. ಡಿಸಿಎಂ ಅವರು ಭೇಟಿ ನೀಡಿದ್ದಾರೆ. ಜೊತೆಗೆ ಆಣೆಕಟ್ಟುಗಳ ಗಟ್ಟಿತನದ ಸಮೀಕ್ಷೆ ನಡೆಸಲಾಗುತ್ತದೆ ಎಂದರು.
ವಿಜಯೇಂದ್ರ-ಅಶೋಕ್ ನಾಯಕತ್ವವನ್ನು ಒಪ್ಪುತ್ತಿಲ್ಲ :
ಕೂಡಲ ಸಂಗಮದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕುರಿತಂತೆ ಮಾತನಾಡಿದ ಅವರು, ವಿಜಯೇಂದ್ರ ಹಾಗೂ ಅಶೋಕ ಅವರ ನಾಯಕತ್ವವನ್ನು ಬಿಜೆಪಿಯ ಮತ್ತೊಂದು ಗುಂಪು ಒಪ್ಪುತ್ತಿಲ್ಲ. ಇದು ಬಿಜೆಪಿ ವರ್ಸಸ್ ಬಿಜೆಪಿಯಾಗಿದೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ದಿಲ್ಲಿ ಚಲೋ ಮಾಡಿದರೆ, ನಾವೇ ಅವರಿಗೆ ಬೆಂಬಲ ಕೊಡುತ್ತೇವೆ. ಅದು ಬಿಜೆಪಿಯವರಿಂದ ಆಗುತ್ತಿಲ್ಲ. ಕಾರಣ ಅವರಿಗೆಲ್ಲ ಮೋದಿ ಎದುರು ಮಾತನಾಡುವ ದಮ್ಮು ತಾಕತ್ತು ಇಲ್ಲ ಎಂದು ಟೀಕಿಸಿದರು.