ಸಿದ್ದರಾಮಯ್ಯ ಅವರನ್ನು ಐದು ವರ್ಷ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ : ಸಚಿವ ಝಮೀರ್ ಅಹ್ಮದ್
ಕಲಬುರಗಿ : ಬಿಜೆಪಿಯವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರೂ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಅಧಿಕಾರ ಮಾತ್ರ. ಅಭಿವೃದ್ಧಿ ಬಗ್ಗೆ ಮಾತನಾಡುವುದು ಬಿಟ್ಟು, ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದೂ, ಮುಸ್ಲಿಮ್ ಎಂದು ಹೇಳಿಕೊಂಡು ತಿರುಗುತ್ತಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಕಲಬುರಗಿ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸಲು ಪ್ರಯತ್ನ ಮಾಡಬೇಕೆ ಹೊರತು, ಸಮಾಜಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಮೇಲೆ ಎಲ್ಲ ಸಮಾಜದವರು ನಮ್ಮ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾರೆ. ನಾವೆಲ್ಲರೂ ಭಾರತೀಯರು ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಝಮೀರ್ ಅಹ್ಮದ್ ಖಾನ್, ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಸಿದ್ದರಾಮಯ್ಯ ಅವರನ್ನು ಐದು ವರ್ಷ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ನೂರು ಜನ ವಿಜಯೇಂದ್ರ, ನೂರು ಜನ ಯಡಿಯೂರಪ್ಪ, ನೂರು ಜನ ಕುಮಾರಸ್ವಾಮಿ ಬಂದರೂ ಸಿದ್ದರಾಮಯ್ಯರನ್ನು ಏನು ಮಾಡಲು ಆಗುವುದಿಲ್ಲ. ಸಿದ್ದರಾಮಯ್ಯ ಟೈಗರ್, ಹುಲಿ ಇದ್ದ ಹಾಗೆ ಎಂದು ಹೇಳಿದರು.
ಫೆಲೇಸ್ತಿನಿಯರಿಗೆ ರಾಜ್ಯ, ಕೇಂದ್ರ ಸರಕಾರ ಬೆಂಬಲ ಕೊಟ್ಟಿದೆ :
ಈದ್ ಮೀಲಾದ್ ಸಂದರ್ಭದಲ್ಲಿ ಯುವಕರು ಫೆಲೇಸ್ತಿನ್ ಧ್ವಜ ಹಿಡಿದು ಓಡಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಫೆಲೇಸ್ತಿನಿಯರಿಗೆ ರಾಜ್ಯ, ಕೇಂದ್ರ ಸರಕಾರ ಬೆಂಬಲ ಕೊಟ್ಟಿದೆ. ಹೀಗಾಗಿಯಾರೋ ಕೆಲವು ಯುವಕರು ಧ್ವಜ ಹಿಡಿದುಕೊಂಡು ಓಡಾಡಿದ್ದಾರೆ. ಕೇಂದ್ರ ಸರಕಾರ ಫೆಲೇಸ್ತಿನ್‍ಗೆ ಬೆಂಬಲ ಘೋಷಣೆ ಮಾಡದೆ ಇದ್ದಿದ್ದರೆ ಯಾಕೆ ಅವರು ಧ್ವಜ ಹಿಡಿಯುತ್ತಿದ್ದರು ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಈಗ ಮಾತನಾಡಲು ಯಾವುದೆ ವಿಷಯ ಇಲ್ಲ. ಆದುದರಿಂದ, ಅನಗತ್ಯ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.