ಕಲಬುರಗಿಯಿಂದ ದೆಹಲಿ, ಬೆಂಗಳೂರಿಗೆ ನಿರಂತರ ವಿಮಾನ ಸಂಚಾರಕ್ಕೆ ಸಂಸದ ರಾಧಾಕೃಷ್ಣ ದೊಡ್ಡಮನಿ ಒತ್ತಾಯ

ರಾಧಾಕೃಷ್ಣ ದೊಡ್ಡಮನಿ
ಕಲಬುರಗಿ : ಕಲಬುರಗಿಯಿಂದ ಹೆಹಲಿ ಹಾಗೂ ಬೆಂಗಳೂರು ಮಧ್ಯೆ ನಿರಂತರ ವಿಮಾನ ಹಾರಾಟ ನಡೆಸುವಂತೆ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದಾರೆ.
ಗುರುವಾರ ಸಂಸತ್ತಿನ ಕಲಾಪದ ವೇಳೆ ವಿಮಾನ ವಸ್ತುಗಳ ಮೇಲಿನ ಹಿತಾಸಕ್ತಿ ರಕ್ಷಣೆ ಬಿಲ್ - 2025 ( The Protection of Interests in Aircraft Objects Bill, 2025 ) ಕುರಿತು ಮಾತನಾಡಿದ ರಾಧಾಕೃಷ್ಣ ಅವರು, ಕಲಬುರಗಿ ವಿಮಾ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು, ಕಲಬುರಗಿ- ಬೆಂಗಳೂರು ಹಾಗೂ ಕಲಬುರಗಿ- ನವದೆಹಲಿ ಮಧ್ಯೆ ನಿಯಮಿತವಾಗಿ ವಿಮಾನ ಸೇವೆ ಒದಗಿಸುವ ಮೂಲಕ ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
"ಬೆಂಗಳೂರು ನಂತರ ಅತಿದೊಡ್ಡ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೆಲ ಪ್ರಮುಖ ಮೂಲಭೂತ ಸೌಕರ್ಯಗಳ ಸ್ಥಾಪನೆಗಾಗಿ ಕೇಂದ್ರ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಲಾಗುತ್ತಿದೆ. ಜೊತೆಗೆ ಕಲಬುರಗಿ ದೆಹಲಿ ನಡುವೆ ವಿಮಾನಗಳ ಸಂಚಾರ, ಬೆಂಗಳೂರು ಮತ್ತು ಕಲಬುರಗಿ ನಡುವೆ ಹಾರಾಟದ ಆವರ್ತನ ಹೆಚ್ಚಳ, ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (MRO) ಸೌಲಭ್ಯಗಳ ಸ್ಥಾಪನೆ, ಇಂಡಿಗೋ ವಿಮಾನಗಳ ಪರಿಚಯ, ಮಾರ್ಗಗಳ ವಿಸ್ತರಣೆ, ಪಾರ್ಕಿಂಗ್ ಸ್ಥಳಗಳ ವಿಸ್ತರಣೆ ಮುಂತಾದ ವಿಷಯಗಳಿಗಾಗಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ನಿರಂತರವಾಗಿ ಕೇಂದ್ರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಇದೂವರೆಗೆ ಯಾವುದೇ ಪ್ರಯೋಜನವಾಗಿಲ್ಲ" ಎಂದು ಸಂಸದರು ಹೇಳಿದರು.
ಮೇ 17, 2023 ರಂದು ರಾತ್ರಿ ಕಾರ್ಯಾಚರಣೆಗಳು ಸೇರಿದಂತೆ ಎಲ್ಲಾ ಹವಾಮಾನ ಕಾರ್ಯಾಚರಣೆಗಳಿಗೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (IFR) ( ಡಿಜಿಸಿಎ )ಅನುಮತಿ ನೀಡಿದೆ. ಆದಾಗ್ಯೂ, ಈ ಅನುಮತಿಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಮೂಲಸೌಕರ್ಯ ನವೀಕರಣಗಳು ಅತ್ಯಗತ್ಯವಿದೆ. ಅಲ್ಲದೇ, ಪ್ರಸ್ತುತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೇವಲ ಎರಡು ಪಾರ್ಕಿಂಗ್ ಸ್ಥಳಗಳಿವೆ. ರಾತ್ರಿ-ಲ್ಯಾಂಡಿಂಗ್ ಸಿಮ್ಯುಲೇಟರ್ ಪ್ರಯೋಗ ಪೂರ್ಣಗೊಂಡ ನಂತರ, ಕನಿಷ್ಠ ಎರಡು ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳ ನಿರ್ಮಾಣ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಐತಿಹಾಸಿಕ ಅಸಮಾನತೆಗಳು ಮತ್ತು ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯಿಂದಾಗಿ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಗೆ ಭಾರತದ ಸಂವಿಧಾನದ 371-ಜೆ ವಿಧಿ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಈ ಪ್ರದೇಶದ ಹೆಚ್ಚು ಅಗತ್ಯವಿರುವ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗಾಗಿ ಕಲಬುರಗಿ ಮತ್ತು ಬೆಂಗಳೂರು ಮತ್ತು ದೆಹಲಿಯಂತಹ ಪ್ರಮುಖ ನಗರಗಳ ನಡುವೆ ನಿಯಮಿತ ವಿಮಾನ ಸಂಪರ್ಕವನ್ನು ಸ್ಥಾಪಿಸುವುದು ಅತ್ಯಗತ್ಯವಾಗಿದೆ.
1) ಬೆಂಗಳೂರು- ಕಲಬುರಗಿ- ದೆಹಲಿ (ಬೆಳಿಗ್ಗೆ)
2)ದೆಹಲಿ - ಕಲಬುರಗಿ- ಬೆಂಗಳೂರು (ಸಂಜೆ: 5 ಅಥವಾ 6) ಜೊತೆಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಅಭಿವೃದ್ಧಿ ಯೋಜನೆಗಳಿಗೆ ತಕ್ಷಣದ ಗಮನ ಹರಿಸಬೇಕಾಗಿದೆ ಎಂದು ಸಭಾಧ್ಯಕ್ಷರ ಮೂಲಕ ಕೇಂದ್ರ ಸಚಿವರಿಗೆ ರಾಧಾಕೃಷ್ಣ ಅವರು ಒತ್ತಾಯಿಸಿದ್ದಾರೆ.