ಕಲಬುರಗಿ | ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ನಿರ್ದೇಶನ

ಕಲಬುರಗಿ: ಕಲಬುರಗಿ ನಗರ ಮತ್ತು ಕಮಲಾಪುರ ತಾಲೂಕಿನ ಹೊಳಕುಂದಾ ಐತಿಹಾಸಿಕ ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಲಬುರಗಿ ನಗರದ ಖಲಂದರ್ ಖಾನ್ ಮಸೀದಿ, ಹೀರಾ ಮಸೀದಿ, ಅಲ್ಲಾವುದ್ದೀನ್ ಹಾಸಗಂಗು ಮಸೀದಿ ಮತ್ತು ಚೋರ್ ಗುಂಬಝ್ ಹಾಗೂ ಕಮಲಾಪುರ ತಾಲೂಕಿನ ಹೊಳಕುಂದ ವಿಠ್ಠಲ್ ರುಕ್ಮಿಣಿ ದೇವಸ್ಥಾನಗಳಿಗೆ ಭೇಟಿ ನೀಡಿದರು. ತಿಥಿಲಾವಸ್ಥೆಯಲ್ಲಿರುವ ಈ ಸ್ಮಾರಕಗಳನ್ನು ಸಂರಕ್ಷಿಸಿದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ಪರಿಚಯಿಸಲು ಮತ್ತು ಅದರ ಇತಿಹಾಸ ಅರಿಯಲು ಸಾಧ್ಯ ಎಂದರು.
ಸ್ಮಾರಕ ಸಂರಕ್ಷಣೆಗೆ ಕಾರ್ಪೊರೇಟ್ ಕಂಪೆನಿಗಳ ಸಿ.ಎಸ್.ಆರ್. ನಿಧಿ ಪಡೆಯುವ ಚಿಂತನೆ ನಡೆದಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಪ್ರವಾಸಿ, ಸ್ಮಾರಕಗಳ ಅಭಿವೃದ್ಧಿಗೆ ಸಂಪುಟ ಅನುಮೋದನೆ ದೊರೆತಿರುವುದರಿಂದ ಕೂಡಲೆ ಆಡಳಿತಾತ್ಮಕ ಮಂಜೂರಾತಿ ಪಡೆದು ಸ್ಮಾರಕ ಸಂರಕ್ಷಣೆ ಮತ್ತು ಪ್ರವಾಸಿ ಸ್ಥಾನಗಳ ಮೂಲಸೌಕರ್ಯ ಬಲಪಡಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.