ಮಾತೆತ್ತಿದ್ದರೇ ಹಿಂದುತ್ವದ ಬಗ್ಗೆ ಮಾತನಾಡುವವರು ತಾವು ಯಾವ ಕಡೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ: ರೇಣುಕಾಚಾರ್ಯ
ರೇಣುಕಾಚಾರ್ಯ/ಯತ್ನಾಳ್
ಕಲಬುರಗಿ: ನಾಲ್ಕು ದಶಕಕ್ಕೂ ಹೆಚ್ಚು ಅವಧಿ ಕಾಲ ಸೈಕಲ್ ತುಳಿಯುವ ಮೂಲಕ ಪಕ್ಷವನ್ನು ಕಟ್ಟಿ ಬೆಳೆಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಧ್ವನಿ ಎತ್ತುವುದು ಸರಿಯಲ್ಲ. ನಾವು ಹೋರಾಟ ಯಾರ ವಿರುದ್ಧ ಮಾಡಬೇಕು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಮಾತೆತ್ತಿದ್ದರೇ ಹಿಂದುತ್ವದ ಬಗ್ಗೆ ಮಾತನಾಡುವವರು ತಾವು ಯಾವ ಪಕ್ಕದಲ್ಲಿ ಇದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಯತ್ನಾಳ್ ರನ್ನು ಪರೋಕ್ಷವಾಗಿ ಟೀಕಿಸಿದರು.
ಕೆಲವು ವಿಷಯಗಳ ಕುರಿತು ಚರ್ಚಿಸಲು ನಾವು ನೂರಕ್ಕೆ ನೂರರಷ್ಟು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯತ್ತ ಹೋಗುತ್ತೇವೆ, ಕಾದು ನೋಡಿ. ಈಗಲೇ ಎಲ್ಲವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ನೀತಿಗಳ ವಿರುದ್ಧ ಒಂದಾಗಿ ಹೋರಾಟ ಮಾಡಿ ಬಿಜೆಪಿ ಜೊತೆ ಇರಬೇಕಾದವರು, ಅವರದ್ದೇ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಸುತ್ತಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಕ್ಫ್ ವಿರುದ್ಧ ರಾಜ್ಯಾದ್ಯಂತ ಪ್ರವಾಸ ಮಾಡಿ, ನಮ್ಮ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ವಿಜಯೇಂದ್ರ ವ್ಯಕ್ತಿಯಲ್ಲ. ಬದಲಾಗಿ ಅವರು ನಮ್ಮ ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಹೋಗಬೇಕಾದರೆ ನಿಮ್ಮ ನಡುವಳಿಕೆಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಯತ್ನಾಳ್ ಗೆ ತಿವಿದರು.
ಕಾಂಗ್ರೆಸ್ ಸರಕಾರ ದೀನ ದಲಿತರ, ರೈತರ, ಮಠ ಮಾನ್ಯಗಳ ಜಮೀನು ಕಬಳಿಸುವ ಹುನ್ನಾರ ನಡೆಸುತ್ತಿದೆ. ನಮ್ಮ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಇಲ್ಲಿ ಆಗುತ್ತಿರುವ ವಾಸ್ತವಾಂಶವನ್ನು ಕುರಿತು ಮನವರಿಕೆ ಮಾಡಲಾಗುವುದು ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.