ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಲಿ : ಪ್ರೊ.ಸತ್ಯನಾರಾಯಣ
ಸಿಯುಕೆಯಲ್ಲಿ ಎನ್ಐಆರ್ಎಫ್ ಶ್ರೇಯಾಂಕ ಕಾರ್ಯಾಗಾರ
ಕಲಬುರಗಿ : “ವಿಶ್ವವಿದ್ಯಾನಿಲಯಗಳು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಬಲ್ಲ ಗುಣಮಟ್ಟದ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಬೇಕು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ)ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ ಆಯೋಜಿಸಿದ್ದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್ಐಆರ್ಎಫ್) ಶ್ರೇಯಾಂಕ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಎನ್ಐಆರ್ಎಫ್ ಮತ್ತು ರಾಷ್ಟ್ರೀಯ ಮಾನ್ಯತೆ ಮೌಲ್ಯಮಾಪನ ಮಂಡಳಿ (ನ್ಯಾಕ್) ಗಳ ಶೈಕ್ಷಣಿಕ ಶ್ರೇಯಾಂಕದಿಂದ ಅಳೆಯಲಾಗುತ್ತದೆ. ಇಂದು ವಿವಿಗಳಿಗೆ ಪ್ರವೇಶ ಪಡೆಯುವ ಮುನ್ನ ವಿಶ್ವವಿದ್ಯಾನಿಲಯಗಳ ಶ್ರೇಯಾಂಕವನ್ನು ನೋಡುತ್ತಿದ್ದಾರೆ. ಉತ್ತಮ ಗುಣಮಟ್ಟದ ವಿಶ್ವವಿದ್ಯಾನಿಲಯಗಳನ್ನು ಪಡೆಯಲು ನಾವು ಉತ್ತಮ ಶ್ರೇಣಿಯನ್ನು ಹೊಂದಿರಬೇಕು. ಇಂದು ನಾವು ಕೇವಲ ಸರಕಾರಿ ವಿಶ್ವವಿದ್ಯಾಲಯಗಳೊಂದಿಗೆ ಮಾತ್ರವಲ್ಲದೆ, ಖಾಸಗಿ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ದಿಸುತ್ತಿದ್ದೇವೆ. ಉತ್ತಮ ಶ್ರೇಯಾಂಕ ಪಡೆಯಲು ನಾವು ರೈತರಂತೆ ಹಗಲಿರುಳು ಕೆಲಸ ಮಾಡಬೇಕು. ಕಷ್ಟಪಟ್ಟು ಕೆಲಸ ಮಾಡುವುದು ಮಾತ್ರವಲ್ಲದೆ ನಾವು ಮಾಡಿದ ಕೆಲಸಕ್ಕೆ ದಾಖಲೆಗಳನ್ನು ಸೃಷ್ಟಿಸಬೇಕು" ಎಂದರು.
ಇನ್ಸ್ಟಿಟ್ಯೂಟ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್, ಹೈದರಾಬಾದ್ನ ಸಂಪನ್ಮೂಲ ವ್ಯಕ್ತಿ ಪ್ರೊ.ಎನ್.ವಿ.ಶಾಸ್ತ್ರಿ ಅವರು ಮಾತನಾಡಿ "ಯಾವುದೇ ಶೈಕ್ಷಣಿಕ ಶ್ರೇಯಾಂಕವು ಅಲ್ಪಾವಧಿಯ ಪ್ರಕ್ರಿಯೆಯಾಗಿದೆ. ಎನ್ಐಆರ್ಎಫ್ ಶ್ರೇಯಾಂಕವನ್ನು ಸುಧಾರಿಸುವುದು ಕೇವಲ ಸಂಖ್ಯೆಗಳೊಂದಿಗೆ ಆಟವಾಡುವುದಲ್ಲ, ಅದು ಅದಕ್ಕಿಂತ ಹೆಚ್ಚಿನ ಪ್ರಕ್ರಿಯೆಯಾಗಿದೆ. ಇದು ನಾವು ಇತರ ಸಂಸ್ಥೆಗಳೊಂದಿಗೆ ನಿರಂತರ ಓಟವಾಗಿದೆ. ಮೊದಲು ಎನ್ಐಆರ್ಎಫ್ ಶ್ರೇಯಾಂಕವನ್ನು ಸುಧಾರಿಸಲು ನಾವು ನಮ್ಮ ಪ್ರಸ್ತುತ ಮತ್ತು ಹಿಂದಿನ ಕ್ಷಮತೆಯನ್ನು ವಿಶ್ಲೇಷಿಸಬೇಕು ಮತ್ತು ಇತರ ಸಂಸ್ಥೆಗಳೊoದಿಗೆ ತುಲನಾತ್ಮಕ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ ಎಂದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಐಕ್ಯೂಎಸಿ ನಿರ್ದೇಶಕ ಪ್ರೊ.ಗಣೇಶ ಪವಾರ, ಪ್ರೊ.ಅಂಬಿಕಾ ಪ್ರಸಾದ್, ಡಾ.ವಿಷ್ಣು, ಸಿಯುಕೆ ಎನ್ಐಆರ್ಎಫ್ ನೋಡಲ್ ಅಧಿಕಾರಿ ಡಾ.ಗುರುರಾಜ ಮುಕರಂಬಿ, ಹಣಕಾಸು ಅಧಿಕಾರಿ ರಾಮದೊರೈ, ಪ್ರೊ.ವಿಕ್ರಂ ವಿಸಾಜಿ, ಪ್ರೊ.ಬಸವರಾಜ ಕುಬಕಡ್ಡಿ, ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಸತ್ಯನಾರಾಯಣ, ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.