ಎನ್‌ಎಸ್‌ಎಸ್‌ನಿಂದ ವ್ಯಕ್ತಿತ್ವ ವಿಕಸನ: ನೀಲಕಂಠ ಶಿವಾಚಾರ್ಯ
ಕಲಬುರಗಿ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದು ನಿಂಬರ್ಗಾದ ಗದ್ದಿಗೇಶ್ವರ ವಿರಕ್ತಮಠದ ನೀಲಕಂಠಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಆಳಂದ ತಾಲೂಕಿನ ನಿಂಬರ್ಗಾದ ಸರಕಾರಿ ಪದವಿಪೂರ್ವ ಕಾಲೇಜಿನ ವತಿಯಿಂದ ಶ್ರೀಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾಯೋಜನೆಯ ಮುಖ್ಯ ಉದ್ದೇಶ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ದಿಗೊಳಿಸುವುದಾಗಿದೆ ಇದು ಮಹಾತ್ಮಾಗಾಂಧಿಜೀಯವರ ಕನಸಾಗಿತ್ತು. ಪ್ರಸ್ತುತ ದೇಶ-ವಿದೇಶಗಳ ನಡುವೆ, ಮನುಷ್ಯ- ಮನುಷ್ಯರ ನಡುವೆ ಅನೇಕ ಸಂಘರ್ಷಗಳು ನಡೆಯುತ್ತಿವೆ. ಇಂತಹ ಕಾಲದಲ್ಲಿ ಗಾಂಧಿಜೀಯವರ ತತ್ವಾದರ್ಶಗಳು ಪ್ರಸಕ್ತ ಜಗತ್ತಿಗೆ ಬೇಕಾಗಿವೆ. ರಾಷ್ಟ್ರ ಪ್ರಗತಿಯಾಗಬೇಕಾದರೆ ಅದರಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನರಿತು ಬದುಕಬೇಕು ಎಂದರು.
ಎನ್‌ಎಸ್‌ಎಸ್‌ನಿಂದ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಪ್ರಜ್ಙೆ ಜಾಗೃತಗೊಳ್ಳುತ್ತದೆ, ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ದಿ, ಕೌಶಲ್ಯ ಇವುಗಳನ್ನು ಸಮಾಜದ,ದೇಶದ ಒಳತಿಗಾಗಿ ಫಲಾಪೇಕ್ಷೆ ಇಲ್ಲದೆ ಅಪರ್ಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆ ಆದ್ದರಿಂದ ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿನಾಥ ನಾಟೀಕಾರ, ಶಿಬಿರದ ಮುಖ್ಯ ಉದ್ದೇಶ ಮಕ್ಕಳಲ್ಲಿ ಶಿಸ್ತು, ಸಂಯಮ ಮತ್ತು ಸಹಭಾಳ್ವೆ ಕಲ್ಲಿಸುವುದು. ಎನ್‌ಎಸ್‌ಎಸ್ ಮೂಲಕ ಸಮಾನತೆಯ ಭಾವ ಮೂಡುವುದಕ್ಕೆ ಸಾಧ್ಯವಾಗುತ್ತದೆ. ಈ ಶಿಬಿರಗಳಿಂದ ಗ್ರಾಮದ ಜನರಲ್ಲಿ ಆರೋಗ್ಯ, ಪರಿಸರ, ನೈರ್ಮಲ್ಯ, ಶಿಕ್ಷಣ, ಸಾಮಾಜಿಕ ಪಿಡುಗುಗಳು, ಭ್ರಷ್ಟಾಚಾರ ನಿರ್ಮೂಲನೆಯಂತ ವಿಷಯಗಳ ಕುರಿತು ಅರಿವು ಉಂಟಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ರೇಖಾಬಬಾಯಿ ಚವ್ಹಾಣ,ಶರಣಬಸವೇಶ್ವರ ಟ್ರಸ್ಟನ ಕಾರ್ಯದರ್ಶಿ ಈರಣ್ಣ ಬಿರಾದಾರ ಆಗಮಿಸಿದ್ದರು. ಕಾಲೇಜಿನ ಉಪನ್ಯಾಸಕರುಗಳಾದ ಲಕಪತಿರಾಜ ಬಡದಾಳ, ಸಿದ್ದರಾಮ ಸನಗುಂದಿ, ತೇಜಶ್ವಿನಿ ಪಾಟೀಲ್, ಸಪ್ನಾ ಕಣ್ಣಿ, ನಿಂಗಮ್ಮ ಹಾಗೂ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸರ್ವರನ್ನು ಕನ್ನಡ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ರವಿಶಂಕರ ವಮ್ಮಾ ಸ್ವಾಗತಿಸಿದರು. ಪ್ರಶಾಂತ ಮಸ್ತಕರ್ ವಂದಿಸಿದರು.