ಗುಲ್ಬರ್ಗಾ ವಿ.ವಿ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ತೆರೆ
ಯುವ ಸಮೂಹ ವಿವೇಕ, ಚಿತ್ತದಿಂದ ಹೆಜ್ಜೆ ಇಡಬೇಕಿದೆ : ವಸುಂಧರಾ ಭೂಪತಿ

ಕಲಬುರಗಿ : ಜಾಗತೀಕರಣದ ಭರಾಟೆಯಿಂದ ಎಲ್ಲೆಡೆ ಅವ್ಯಾಹತ ತಂತ್ರಜ್ಞಾನ, ಇತ್ತೀಚಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಕೆ ಮಾಡುತ್ತಿದ್ದು, ಇದು ಮುಂದೆ ಉದ್ಯೋಗಕ್ಕೆ ಕುತ್ತು ಬಂದು ನಿರುದ್ಯೋಗದ ದೊಡ್ಡ ಸಮಸ್ಯೆ ಎದುರಾಗಲಿದೆ. ಹೀಗಾಗಿ ಮುಂದಿನ ಭವಿಷ್ಯದ ಬಗ್ಗೆ ಯುವ ಸಮೂಹ ವಿವೇಕ ಚಿತ್ತದಿಂದ ಹೆಜ್ಜೆ ಇಡಬೇಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ ಹೇಳಿದ್ದಾರೆ.
ಸೋಮವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತರ್ ಮಹಾವಿದ್ಯಾಲಯ ಯುವಜನೋತ್ಸವ-2024ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಉದಾರೀಕರಣ ಮತ್ತು ಖಾಸಗೀಕರಣದ ಪರಿಣಾಮ ಸರ್ಕಾರಿ ಸೇವಾ ವಲಯದಲ್ಲಿ ಯುವಕರಿಗೆ ಉದ್ಯೋಗ ಇಲ್ಲದಂತಾಗಿದೆ ಎಂದರು.
ಕಾರ್ಪೋರೇಟ್ ಕಂಪನಿಗಳು ತಮ್ಮ ಲಾಭಕ್ಕಾಗಿ ಅಂತರ್ ರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿ, ಕಲಾವಿದರನ್ನು ಮಾತ್ರ ಪ್ರೋತ್ಸಾಹಿಸುತ್ತವೆ ಹೊರತು ದೇಶಿ ಕಲಾವಿದರನಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ವಿ.ವಿ. ವೇದಿಕೆ ಕಲ್ಪಿಸಿದ್ದು ಶ್ಳಾಘನೀಯವಾಗಿದೆ ಎಂದ ಅವರು, ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ಭಾಗಿಯಾದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗಲಿದೆ ಎಂದರು.
ದಕ್ಷಿಣ ವಲಯ ಅಂತರ ವಿ.ವಿ. ಯುಜನೋತ್ಸವಕ್ಕೆ ಗುಲ್ಬರ್ಗಾ ವಿ.ವಿ. ಭಾಗಿ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಮಾತನಾಡಿ, ಇದೇ ಡಿ.19 ರಂದು ಬೆಂಗಳೂರಿನ ಕ್ರೈಸ್ಟ್ ವಿ.ವಿ.ಯಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಯುವಜನೋತ್ಸವ ನಡೆಯಲಿದ್ದು, ಗುಲ್ಬರ್ಗಾ ವಿ.ವಿ.ಯ 58 ಜನರ ತಂಡ ಭಾಗವಹಿಸಲಿದೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿ ವಿ.ವಿ. ಕೀರ್ತಿ ಹೆಚ್ಚಿಸಬೇಕೆಂದು ಶುಭಕೋರಿದಲ್ಲದೆ ಮೂರು ದಿನಗಳ ಇಲ್ಲಿನ ಅಂತರ್ ಮಹಾವಿದ್ಯಾಲಯ ಯುವಜನೋತ್ಸವ ಯಶಸ್ಸಿಗೆ ದುಡಿದ ಎಲ್ಲಾ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವದ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಕಲಬುರಗಿಯ ಶರಣಬಸವೇಶ್ವರ ಕಾಲೇಜ್ ಆಪ್ ಸೈನ್ಸ್ ಕಾಲೇಜಿಗೆ ಓವರಾಲ್ ವಿನ್ನರ್ ಮತ್ತು ಕಲಬುರಗಿಯ ರಶ್ಮಿ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾಲೇಜಿಗೆ ರನ್ನರ್ ಅಫ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುಲ್ಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಉದಯಕಾಂತ ಪಾಟೀಲ, ವಿದ್ಯಾವಿಷಯಕ ಪರಿಷತ್ ಸದಸ್ಯ ಮತ್ತು ಕಾನೂನು ನಿಕಾಯದ ಡೀನ್ ಡಾ.ದೇವಿದಾಸ್ ಮಾಲೆ, ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್.ಕಟ್ಟಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕ ವೃಂದದವರು ಭಾಗವಹಿಸಿದ್ದರು. ಗುಲ್ಬರ್ಗಾ ವಿ.ವಿ. ಕುಲಸಚಿವ ಪ್ರೊ.ರಾಜನಾಳ್ಕರ ಲಕ್ಷ್ಮಣ ಸ್ವಾಗತಿಸಿದರು. ದೈಹಿಕ ವಿಭಾಗದ ನಿರ್ದೇಶಕ ಡಾ.ಲಿಂಗಣ್ಣ ಕಣ್ಣೂರು ವಂದಿಸಿದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿ ಮತ್ತು ಸಾಂಸ್ಕೃತಿಕ ಸಂಯೋಜಕ ಪ್ರೊ.ರಮೇಶ ಲಂಡನಕರ್ ಅವರು ಮುಖ್ಯ ಅತಿಥಿ ವಸುಂಧರಾ ಭೂಪತಿ ಅವರನ್ನು ಪರಿಚಯಿಸಿದಲ್ಲದೆ ಮೂರು ದಿನಗಳ ಕಾಲ ಯುವ ಜೋಷ್ ನೊಂದಿಗೆ ಜರುಗಿದ ಸಂಭ್ರಮದ ಯುವಜನೋತ್ಸವ-2024ರ ಕುರಿತು ವರದಿ ಮಂಡಿಸಿದರು.