ಪೆನ್ ಡ್ರೈವ್ ಪ್ರಕರಣ | ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಈಗ ಏಕೆ ಮೌನ? : ಪ್ರಿಯಾಂಕಾ ಗಾಂಧಿ
ಕಲಬುರಗಿ : ವಿಪಕ್ಷ ನಾಯಕರು ಎಲ್ಲಿ ಹೋಗುತ್ತಾರೆ ಅನ್ನೋ ಮಾಹಿತಿ ತಿಳಿದುಕೊಳ್ಳುವ ಪ್ರಧಾನಿ ಮೋದಿಗೆ, ಕರ್ನಾಟಕದಲ್ಲಿ ಇವರ ಜೊತೆ ವೇದಿಕೆ ಹಂಚಿಕೊಂಡಿದ್ದ ವ್ಯಕ್ತಿ, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ದೇಶ ಬಿಟ್ಟು ಹೋದರೂ ಗೊತ್ತಾಗುವುದಿಲ್ಲವೇ? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸೇಡಂ ಪಟ್ಟಣದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಮತಯಾಚಿಸಲು ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆತನ ಪರವಾಗಿ ಮತಯಾಚಿಸಿದ್ದ ಮೋದಿ ಹಾಗೂ ಅಮಿತ್ ಶಾ ಈ ಬಗ್ಗೆ ಉತ್ತರಿಸಲಿ. ಚುನಾವಣೆ ಸಂದರ್ಭದಲ್ಲಿ ಮಹಿಳೆಯರ ಮಂಗಳಸೂತ್ರ, ಆಭರಣಗಳ ಬಗ್ಗೆ ಮಾತನಾಡುವ ಮೋದಿ ಈಗೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಒಲಿಂಪಿಕ್ಸ್ ಪದಕ ವಿಜೇತ ಮಹಿಳಾ ಕ್ರೀಡಾಪಟುಗಳ ಮೇಲೆ ಅತ್ಯಾಚಾರ, ಬಲತ್ಕಾರ ಆದಾಗ ಮೋದಿ ಯಾಕೆ ಸುಮ್ಮನಿದ್ದರು? ಹತ್ರಾಸ್, ಉನ್ನಾವ್‍ನಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡಿ, ಸುಟ್ಟು ಹಾಕಿದಾಗ ಅವರು ಯಾರ ಪರವಾಗಿದ್ದರು? ಅಪರಾಧಿಗಳ ರಕ್ಷಣೆ ಮಾಡಿದ್ದು ಯಾರ ಸರಕಾರ? ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಕಲಬುರಗಿಯ ಸಂಸದ ಒಂದು ರೈಲು ಬಿಡಿಸಿದ್ದು, ಬಿಟ್ಟರೇ ಬೇರೆ ಏನು ಮಾಡಿಲ್ಲ. ಕುಡಿಯುವ ನೀರಿಗೂ ಕಷ್ಟಪಡುವ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗ ವಿಲ್ಲದೇ ದೂರದ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.
ಅಗ್ನಿ ವೀರ್ ಯೋಜನೆ ಜಾರಿಗೆ ತಂದು ಸೈನ್ಯಕ್ಕೆ ಸೇರುವ ಯುವಕರ ಕನಸು ನುಚ್ಚುನೂರು ಮಾಡಿದರು. ಜಿಎಸ್‍ಟಿ ಹಾಗೂ ನೋಟು ಅಮಾನ್ಯೀಕರಣದಿಂದ ರೈತರು, ಚಿಕ್ಕಪುಣ್ಣ ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದವರು ಎಲ್ಲ ವರ್ಗದವರು ಕಷ್ಟಪಡುವಂತೆ ಮಾಡಿದರು ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಜಿಲ್ಲೆ ಎಂಬ ಒಂದೇ ಕಾರಣಕ್ಕೆ ಯುಪಿಎ ಸರಕಾರದ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಮಂಜೂರಾಗಿದ್ದ ಹಲವಾರು ಪ್ರಮುಖ ಯೋಜನೆಗಳನ್ನು ಮೋದಿ ನೇತೃತ್ವದ ಸರಕಾರ ವಾಪಸ್ ಪಡೆದಿದೆ. ಕೇಂದ್ರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಮಹಾಲಕ್ಷ್ಮಿ ಯೋಜನೆ ಜಾರಿ, ಖಾಲಿ ಇರುವ ಸರಕಾರಿ ಹುದ್ದೆಗಳ ಭರ್ತಿ, ಅಗ್ನಿವೀರ್ ಯೋಜನೆ ರದ್ದು, ನರೇಗಾ ಮಾನವ ದಿನಗಳ ಹೆಚ್ಚಳ, ರೈತರ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎಂದ ಮೋದಿ ಬಂಡವಾಳ ಶಾಯಿಗಳ 16 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದ್ದಾರೆ. ಕಲಬುರಗಿಯಲ್ಲಿ ತೊಗರಿ ಹಬ್ ಮಾಡುವುದು, ಎಂಎಸ್‍ಪಿ ನಿಗದಿ ಮಾಡುವ ಭರವಸೆ ನೀಡಿದ್ದರು. ಆದರೆ, ಯಾವುದು ಮಾಡಿಲ್ಲ. ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್, ದಿನ ಬಳಕೆ ವಸ್ತುಗಳು ಬೆಲೆ ಏರಿಕೆ ನಿಯಂತ್ರಣ ಮಾಡಿಲ್ಲ. ಪ್ರತಿಯೊಂದಕ್ಕೂ ಜಿಎಸ್‍ಟಿ ಹಾಕಿದ್ದಾರೆ ಎಂದು ಅವರು ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದ್ದಾರೆ. ಆದರೂ, ಮಾಧ್ಯಮಗಳು ಸುಮ್ಮನಿವೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮನೆಗೆ ದಿಲ್ಲಿ ಪೊಲೀಸರು ಬಂದಿರುವ ಬಗ್ಗೆಯೂ ಯಾವ ಮಾಧ್ಯಮಗಳು ಪ್ರಶ್ನಿಸುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ಬಿಜೆಪಿಗೆ 400 ಸ್ಥಾನಗಳು ಬಂದರೆ ಅವರು ಸಂವಿಧಾನ ಬದಲಾಯಿಸುತ್ತಾರೆ. ಈ ಸಂವಿಧಾನದಿಂದಾಗಿಯೇ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕು ಸಿಗುತ್ತಿದೆ. ಆದರೆ ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ ಎಂದು ಅವರು ಹೇಳಿದರು.
ಡಿಆರ್ ಡಿಓ, ಇಸ್ರೋ, ಐಐಟಿ ಆರಂಭಿಸಿದ್ದು ಕಾಂಗ್ರೆಸ್ ಸರಕಾರಗಳು. ಇಂತಹ ಯಾವುದಾದರು ಒಂದು ಯೋಜನೆಯನ್ನು ಮೋದಿ ಜಾರಿಗೆ ತಂದಿದ್ದರೆ ಹೇಳಲಿ. ಬಡವರು ಬಡವರಾಗಿ ಉಳಿಯುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗಿದ್ದಾರೆ. ಇವುಗಳ ಬಗ್ಗೆ ನೀವು ಪ್ರಶ್ನೆ ಮಾಡಿ, ನೀವು ಸುಮ್ಮನಿದ್ದರೆ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಮೋದಿ ಮತ ಕೇಳಲು ಬರುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಎಚ್ಚರಿಸಿದರು.
ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ವಿಚಾರ ಮಾಡಿ ಮತದಾನ ಮಾಡಿ. ನಿಮಗೆ ಮಾಧ್ಯಮಗಳಲ್ಲಿ ಏನು ತೋರಿಸಲಾಗುತ್ತಿದೆಯೋ ಅದು ಸತ್ಯವಲ್ಲ. ಜನರ ಕಷ್ಟ ಮೋದಿಗೆ ಗೊತ್ತಿಲ್ಲ. ಈ ಸರಕಾರವನ್ನು ತೊಲಗಿಸಿ ನಿಮಗೆ ಅನುಕೂಲವಾಗುವಂತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಕಳೆದ ಐವತ್ತು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಶೀರ್ವಾದ ಮಾಡಿ ಎಂದು ಅವರು ಕೋರಿದರು.
ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.