ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಆರ್ಥಿಕತೆ ಸದೃಢಗೊಳ್ಳುತ್ತಿದೆ: ಪ್ರಿಯಾಂಕ್ ಖರ್ಗೆ
ಕಲಬುರಗಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಆರ್ಥಿಕ ಸದೃಢತೆಗೆ ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
" ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು ಇದರ ವಿರುದ್ದ' ನನ್ನ ತೆರಿಗೆ ನನ್ನ ಹಕ್ಕು 'ಘೋಷಣೆಯೊಂದಿಗೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ದೆಹಲಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ಪ್ರತಿವರ್ಷ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ 4.30 ಲಕ್ಷ ಕೋಟಿಯಲ್ಲಿ ಕೊಟ್ಟರೆ ಕೇಂದ್ರ ನಮ್ಮ ರಾಜ್ಯಕ್ಕೆ ಅನುದಾನದ ರೂಪದಲ್ಲಿ ಕೇವಲ 44,000 ಕೋಟಿ ಮಾತ್ರ ಕೊಡುತ್ತಿದೆ. ತುಂಬಾ ಸರಳವಾಗಿ ಹೇಳುವುದಾದರೆ, ರೂ 100 ರಲ್ಲಿ ನಮ್ಮ ಕರ್ನಾಟಕಕ್ಕೆ ಕೇವಲ 13 ರೂ ಮಾತ್ರ ವಾಪಸ್ ಬರುತ್ತಿದೆ. ಆದರೆ, ಅದೇ ಉತ್ತರ ಪ್ರದೇಶಕ್ಕೆ 330 ರೂಪಾಯಿ, ಮಧ್ಯಪ್ರದೇಶಕ್ಕೆ 292 ರೂಪಾಯಿ, ಬಿಹಾರಕ್ಕೆ 972 ರೂಪಾಯಿ, ಓಡಿಶಾಕ್ಕೆ 197 ರೂಪಾಯಿಯನ್ನು ಕೇಂದ್ರ ನೀಡುತ್ತಿದೆ. ಈ ತಾರತಮ್ಯದ ವಿರುದ್ದ ಹೋರಾಟ ಮಾಡಿದರೆ ನಮ್ಮನ್ನೇ ದೇಶ ಒಡೆಯುವವರು ಹಾಗೂ ದೇಶದ್ರೋಹಿಗಳು ಎಂದು ನಮ್ಮನ್ನು ಕರೆಯುತ್ತಿದ್ದಾರೆ" ಎಂದು ಟೀಕಿಸಿದರು.
ವೇದಿಕೆಯ ಮೇಲೆ ಸಚಿವರಾದ ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೆಕೆಆರ್ ಟಿಸಿ ಎಂಡಿ ರಾಚಪ್ಪ, ಚಂದ್ರಕಾಂತ ಗದ್ದಿಗಿ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಹಲವರಿದ್ದರು.