ಕಲಬುರಗಿ: ನಕಲಿ ಅಂಕಪಟ್ಟಿ ಸೃಷ್ಟಿಸಿದ ಆರೋಪದಲ್ಲಿ ಪ್ರಾಂಶುಪಾಲನ ಬಂಧನ
ಕಲಬುರಗಿ: ಸಿ.ಬಿ.ಎಸ್.ಸಿ ನಕಲಿ ಅಂಕಪಟ್ಟಿ ಸೃಷ್ಠಿಸಿದ ಆರೋಪದಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ ವಸತಿ ಕಾಲೇಜಿನ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ.
ಆನಂದ ಕುಂಬಾರ್ ಬಾಬೂರಾವ್ (39) ಬಂಧಿತ ಪ್ರಾಂಶುಪಾಲರು. ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಸಿ ವೃಂದದ 182 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಇಲಾಖೆ ಅರ್ಜಿ ಕರೆದಿತ್ತು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಮೆರಿಟ್ ಆಧಾರದಲ್ಲಿ 546 ಅಭ್ಯರ್ಥಿಗಳ ಜೊತೆ ಇಲಾಖೆ ಪತ್ರ ವ್ಯವಹಾರ ನಡೆಸಿ ಅಸಲಿ ಅಂಕಪಟ್ಟಿ ಪಡೆದುಕೊಂಡು ಪರಿಶೀಲಿಸಿದೆ. 62 ಅಭ್ಯರ್ಥಿಗಳು ದ್ವತೀಯ ಪಿಯುಸಿ ಮತ್ತು ಸಿ.ಬಿ.ಎಸ್.ಸಿ ನಕಲಿ ಅಂಕಪಟ್ಟಿಗಳನ್ನು ನೀಡಿ ಉದ್ಯೋಗ ಪಡೆಯಲು ಯತ್ನಿಸಿದ್ದು ಬೆಳಕಿಗೆ ಬಂದಿದ್ದು, ಇಲಾಖೆಯ ಮುಖ್ಯ ಇಂಜಿನಿಯರ್ ರವರ ಸಹಾಯಕ ಅಡಳಿತ ಅಧಿಕಾರಿಯವರು ಈ ಕುರಿತು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು 25 ಜನರ ಪೈಕಿ ಕೆಲವು ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾಗ ಪ್ರಾಂಶುಪಾಲರಾದ ಆನಂದ ಕುಂಬಾರ್ ಬಾಬೂರಾವ್ 7 ಜನ ಅಭ್ಯರ್ಥಿಗಳಿಗೆ ಸಿ.ಬಿ.ಎಸ್.ಸಿ ನಕಲಿ ಅಂಕಪಟ್ಟಿ ನೀಡಿ ಅವರೊಂದಿಗೆ ಹಣಕಾಸಿನ ವ್ಯವಹಾರ ನಡೆಸಿರುವ ಕಂಡುಬಂದಿದೆ ಎನ್ನಲಾಗಿದೆ.
ಶನಿವಾರ ಬೆಂಗಳೂರು ವಿಶೇಷ ವಿಚಾರಣಾ ದಳದ ಸಿಸಿಬಿ ಪೊಲೀಸರು ಆನಂದ ಕುಂಬಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಕಣಕ್ಕೆ ಸಂಬಂಧಿಸಿದಂತೆ 62 ಅಭ್ಯರ್ಥಿಗಳ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.