ಬಿಜೆಪಿಯದ್ದು ಸಹಮತವಿಲ್ಲದ ಪ್ರತಿಭಟನೆ : ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಕಲಬುರಗಿ : ಬಿಜೆಪಿಯದ್ದು ನಿನ್ನೆಯ ಕಲಬುರಗಿಯಲ್ಲಿನ ಹೋರಾಟ ಸಹಮತವಿಲ್ಲದ್ದಾಗಿದೆ, ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾದಂತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು 'ಎಕ್ಸ್' ನಲ್ಲಿ ಬರೆದುಕೊಂಡಿರುವ ಅವರು, ಈ ಹೋರಾಟ ನಡೆಯುತ್ತಿರುವುದು ಬಿಜೆಪಿಯವರ ಕುರ್ಚಿ ಕಾಳಗದ ಹೋರಾಟವಾಗಿದೆ, VJP ಶಿವಮೊಗ್ಗದಲ್ಲಿ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿದ್ದರೆ, YJP ವಕ್ಫ್ ಹೆಸರು ಹೇಳಿಕೊಂಡು ಕುರ್ಚಿ ಕಿತ್ತುಕೊಳ್ಳುವ ಹೋರಾಟದಲ್ಲಿತ್ತು, AJP ಎತ್ತ ಸೇರುವುದು ಎಂದು ತಿಳಿಯದೆ ಕಲಬುರಗಿಯಲ್ಲಿ ಹೋರಾಟದ ನಾಟಕ ನಡೆಸಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿಯಲ್ಲಿ ಸಹಮತ, ಸಹಬಾಳ್ವೆ, ಸಮಾಧಾನ ಯಾವುದೂ ಇಲ್ಲದೆ ತಮ್ಮ ಹುಳುಕು ಮುಚ್ಚಿಕೊಳ್ಳಲು ʼಪ್ರಿಯಾಂಕ್ ಖರ್ಗೆʼ ಹೆಸರಿಗೆ ಜೋತು ಬಿದ್ದಿದೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗೆ ಬಿಜೆಪಿಯಲ್ಲೇ ಸಹಮತ ಇಲ್ಲದಿರುವುದು ಇಂದು ಬಟಾಬಯಲಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರ ಮಾತಿಗೆ, ಪ್ರತಿಭಟನೆಯ ಕರೆಗೆ ಬಿಜೆಪಿಯಲ್ಲೇ ನಯಾಪೈಸೆ ಕಿಮ್ಮತ್ತು ಸಿಗದಿರುವಾಗ ಇವರು ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾ ನೋಡಿದಂತೆ ಭಾಸವಾಗುತ್ತದೆ ಎಂದು ಬಿಜೆಪಿಯನ್ನು ತಿಳಿಸಿದ್ದಾರೆ.