ಕಲಬುರಗಿ | ವಾಡಿ ಬಸ್ ನಿಲ್ದಾಣದಲ್ಲಿ ಮೂಲಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ವಾಡಿ ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರಕಾರಿ ಕಾಲೇಜು, ಸುಲಭ ಶೌಚಾಲಯ, ಸಾರ್ವಜನಿಕ ಮೂತ್ರಾಲಯಗಳಿಗಾಗಿ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಾಡಿ ಪಟ್ಟಣದ ಚೌಡೇಶ್ವರ ಚೌಕ್ ದಿಂದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಗೌರವಾಧ್ಯಕ್ಷ ಜಯದೇವ ಜೋಗಿಕಲ್ ಮಠ ಹಾಗೂ ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ, ಕನಿಷ್ಠ ನಾಗರಿಕರಿಗೇ ಮೂಲಸೌಲಭ್ಯ ಒದಗಿಸದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಹೊಂದಿರುವ ಮತ್ತು ಪುರಸಭೆ ಆಡಳಿತ ಕೇಂದ್ರವಾಗಿರುವ ವಾಡಿ ಪಟ್ಟಣಕ್ಕೆ ಪ್ರತಿದಿನ ಹಲವು ಸಾರಿಗೆ ಸಂಸ್ಥೆಯ ಬಸ್ ಗಳು ಹಾದು ಹೋಗುತ್ತವೆ. ಇಂತಹ ಬಸ್ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯ ಬೇಕಾಗುತ್ತದೆ, ಕೂಡಲೇ ಒದಗಿಸಬೇಕೆಂದು ಒತ್ತಾಯಿಸಿದರು.
ಯಾವೂದೇ ಸಬೂಬು ಹೇಳದೆ ತಕ್ಷಣವೇ ವಾಡಿ ಪಟ್ಟಣದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಬೇಕು. ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಬೇಕು. ಪಟ್ಟಣದ ಕನಿಷ್ಠ ಎರಡು ಸ್ಥಳಗಳಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸಬೇಕು. ನಿರ್ಲಕ್ಷ್ಯ ವಹಿಸಿದರೆ ವಾಡಿ ಬಂದ್ ಆಚರಿಸುವ ಮೂಲಕ ಚೆಂಬು ಹಿಡಿದು ಪುರಸಭೆ ಮುತ್ತಿಗೆ ಹಾಕುವ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಪುರಸಭೆ ಆಡಳಿತಕ್ಕೆ ಎಚ್ಚರಿಸಿದರು.
ಜನಧ್ವನಿ ಜಾಗೃತ ಸಮಿತಿಯ ಕಾರ್ಯದರ್ಶಿ ಶೇಖ ಅಲ್ಲಾಭಕ್ಷ್, ಮುಖಂಡರಾದ ಜಯದೇವ ಜೋಗಿಕಲ್ ಮಠ, ಶಿವಪ್ಪ ಮುಂಡರಗಿ, ಯುಸೂಫ್ ಮುಲ್ಲಾ ಕಮರವಾಡಿ, ಭೀಮಸಿಂಗ್ ಚವ್ಹಾಣ, ಮಹಾಂತೇಶ ಬಿರಾದಾರ, ಕಾಶೀನಾಥ ಶೆಟಗಾರ, ಈರಣ್ಣ ಯಲಗಟ್ಟಿ, ದೇವಿಂದ್ರ ದೊಡ್ಡಮನಿ, ಶರಣುಕುಮಾರ ದೋಶೆಟ್ಟಿ, ಲಕ್ಷ್ಮೀ ಸುರೇಶ ಕುಲಕರ್ಣಿ, ವಿಠ್ಠಲ ರಾಠೋಡ, ಚಂದ್ರು ಕರಣಿಕ, ರವಿ ಸಿಂಧಗಿ, ಮಲ್ಲಿಕಾರ್ಜುನ ಹಣಿಕೇರಾ, ಮಹೆಮೂಬ ನದಾಫ್, ಶ್ರೀಶೈಲ್ ಪುರಾಣಿಕ, ಚಂದ್ರು ಮಾಳಗಿ, ರಮೇಶ ಕಾಂಬಳೆ, ಅನೀಲ ನೀರಡಗಿ, ಮುಹಮ್ಮದ್ ರಫೀಕ್, ರಾಜು ಒಡೆಯರಾಜ, ಸುರೇಶ ನಾಟೇಕರ, ಈರಣ್ಣ ಇಸಬಾ, ಮಹಾದೇವಯ್ಯಸ್ವಾಮಿ ಹಿರೇಮಠ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬರೆದ ಮನವಿಪತ್ರವನ್ನು ಉಪ ತಹಶೀಲ್ದಾರ ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಸಿ. ಫಕ್ರುದ್ದೀನ್ ಸಾಬ್ ಅವರಿಗೆ ಸಲ್ಲಿಸಲಾಯಿತು.