ರಾಯಚೂರು | ಬಸವಣ್ಣರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ ಅಗ್ರಹ

ರಾಯಚೂರು : ಸಮಾಜ ಪರಿವರ್ತಕ ಬಸವಣ್ಣರ ಕುರಿತು ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಖಂಡನೀಯ ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ ವೀರೇಶ ಒತ್ತಾಯಿಸಿದ್ದಾರೆ.
ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ, ಜಾತಿ ತಾರತಮ್ಯ ಪ್ರತಿಪಾದಕ ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಸಮಾಜ ಪರಿವರ್ತಕ ಜಾತಿ ಹಾಗೂ ಲಿಂಗ ದಬ್ಬಾಳಿಕೆಯ ವಿರೋಧಿ, ಮಾನವ ಘನತೆಯನ್ನು ಮೆರೆದ ಬಸವಣ್ಣರವರ ಕುರಿತು ಅತ್ಯಂತ ವಿವಾದಾತ್ಮಕವಾಗಿ ಮಾತನಾಡಿರುವುದು ಅಲ್ಲದೇ ಮುಸ್ಲಿಂ ಅಲ್ಪಸಂಖ್ಯಾತ ನಾಗರೀಕರನ್ನು ನಿಂದಿಸಿರುವುದು ಖಂಡನೀಯ. ಶಾಸಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಲಿಂಗಾಯಿತ ಪಂಚಮಸಾಲಿ ಸಮಾಜದ ಮುಖಂಡನೆಂದು ಹೇಳಿಕೊಂಡು, ರಾಜಕೀಯ ರಕ್ಷಣೆ ಪಡೆದುಕೊಂಡಿರುವ ಇವರು ಆ ಸಮುದಾಯಕ್ಕೆ ಈ ರೀತಿಯ ದುರ್ವರ್ತನೆಯ ಮೂಲಕ ಕೆಸರು ಮೆತ್ತುತ್ತಿದ್ದಾನೆ. ಆ ಕುರಿತು ಸಮುದಾಯವು ಕೂಡಾ ಅಗತ್ಯ ಶಿಸ್ತು ಕ್ರಮ ವಹಿಸಬೇಕು ಎಂದಿದ್ದಾರೆ.
ಬಿಜೆಪಿ ಮುಖಂಡನಾಗಿದ್ದರೂ ಬಿಜೆಪಿ ಇಂತಹ ವಿಷಯಗಳ ಇಂತಹ ದುರ್ವರ್ತನೆಗಳನ್ನು ಅದು ಖಂಡಿಸುವುದಿಲ್ಲ. ಬದಲಿಗೆ, ಮೌನ ಸಮ್ಮತಿ ನೀಡುತ್ತದೆ. ಹೀಗಾಗಿ, ಬಿಜೆಪಿ ಅವರ ಮೇಲೆ ಕ್ರಮವಹಿಸಬೇಕೆಂದು ಸಿಪಿಐಎಂ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.