ʼಒಂದು ದೇಶ-ಒಂದು ಚುನಾವಣೆʼ ದೇಶದ ಅಭಿವೃದ್ಧಿಗೆ ಗೇಮ್ ಚೇಂಜರ್ : ರಾಮನಾಥ್ ಕೋವಿಂದ್

ಕಲಬುರಗಿ : ʼಒಂದು ದೇಶ-ಒಂದು ಚುನಾವಣೆʼ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬಂದರೆ ದೇಶದ ಅಭಿವೃದ್ಧಿಗೆ ಗೇಮ್ ಚೇಂಜರ್ ಆಗಲಿದೆ ಎಂದು ಮಾಜಿ ರಾಷ್ಟ್ರಪತಿಗಳೂ ಆಗಿರುವ 'ಒಂದು ದೇಶ-ಒಂದು ಚುನಾವಣೆ' ವರದಿಯ ಉನ್ನತ ಸಮಿತಿಯ ಅಧ್ಯಕ್ಷರಾದ ರಾಮನಾಥ್ ಕೋವಿಂದ್ ಅವರು ಹೇಳಿದ್ದಾರೆ.
ಬುಧವಾರ ಸೇಡಂ ತಾಲೂಕಿನ ಬೀರನಹಳ್ಳಿ ಬಳಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತ ವಿಕಾಸ ಸಂಗಮ ಹಾಗೂ ವಿಕಾಸ್ ಅಕಾಡೆಮಿ ವತಿಯಿಂದ ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಏಳನೇ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
18,526 ಪುಟಗಳನ್ನು ಒಳಗೊಂಡ 'ಒಂದು ದೇಶ-ಒಂದು ಚುನಾವಣೆ' ಉನ್ನತ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದೇವೆ, ಇಷ್ಟೊಂದು ದೊಡ್ಡ ವರದಿ ಈ ಹಿಂದೆ ಯಾರೂ ಸಲ್ಲಿಸಿಲ್ಲ. ಭಾರತದ ಸುಪ್ರೀಂಕೋರ್ಟಿನ 4 ಪ್ರಮುಖ ವಿಶ್ರಾಂತ ಮುಖ್ಯ ನ್ಯಾಯಾಧೀಶರನ್ನು ಅಮಂತ್ರಣ ಮಾಡಿದ್ದೇವೆ. ಅವರೊಂದಿಗೆ ಚರ್ಚಿಸಿದ್ದೇವೆ, ಅವರೆಲ್ಲರೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತದ ಅಭಿವೃದ್ಧಿಯನ್ನು ಬದಲಾಯಿಸಲು ಇದೊಂದು ದೊಡ್ಡ ಶಕ್ತಿಯಾಗಲಿದೆ ಎಂದಿದ್ದಾರೆ ಎಂದು ತಿಳಿಸಿದರು.
ಒಂದು ದೇಶ-ಒಂದು ಚುನಾವಣೆ ಅಂದರೆ ಕೇವಲ ಒಂದು ಬಾರಿ ಚುನಾವಣೆ ನಡೆದು ಮತ್ತೆ ಮುಂದೆ ಚುನಾವಣೆ ನಡೆಯುವುದಿಲ್ಲ ಎನುವುದು ಅಲ್ಲ, ಇದರ ಉದ್ದೇಶ ಒಂದೇ ಆಗಿದೆ ಅದು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆಸುವುದಾಗಿದೆ ಎಂದರು.
ನಮ್ಮ ವರದಿಯು ಈ ಎರಡು ಚುನಾವಣೆಯ ಜೊತೆಗೆ ಸ್ಥಳೀಯ ಚುನಾವಣೆಯ ಕುರಿತಾಗಿಯೂ 100 ದಿನಗಳ ಅವಕಾಶ ಕೊಡುತ್ತದೆ, ಅದರೊಳಗೆ ಸ್ಥಳೀಯ ಮೂರು ಚುನಾವಣೆಗಳು ನಡೆಯಲಿವೆ. ಪ್ರತಿ ತಿಂಗಳು ಚುನಾವಣೆ ಬರುತ್ತವೆ, ಇದರಲ್ಲಿ ಶಿಕ್ಷಕರು ಭಾಗವಹಿಸುತ್ತಾರೆ, ಚುನಾವಣೆಯಲ್ಲಿ ಪ್ರತಿ ಬಾರಿ ಶಿಕ್ಷಕರು ಪಾಲ್ಗೊಳ್ಳುತ್ತಿದ್ದರೆ, ಇದರಲ್ಲಿ ಶಾಲೆಯಲ್ಲಿ ಓದುವ ನಮ್ಮ ಮಕ್ಕಳಿಗೆ ಸಮಸ್ಯೆಯಾಗುತ್ತವೆ, ಹಾಗಾಗಿ ಈ ವರದಿ ಜಾರಿಯಾದರೆ ದೇಶದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಾಚೀನ ಭಾರತ ವಿಕಾಸ ವೇದಗಳಲ್ಲಿ ಪ್ರಕೃತಿಯ ಕುರಿತಾಗಿ ಉಲ್ಲೇಖವಿದೆ, ಋಗ್ವೇದದಲ್ಲಿ ಪೃಥ್ವಿ, ವಾಯು, ಜಲ, ಅಗ್ನಿ ಮತ್ತಿತರ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಈಗಲೂ ಮರಗಳಿಗೆ , ನದಿಗಳಿಗೆ ಪೂಜೆ ಮಾಡುತ್ತೇವೆ ಎಂದು ಹೇಳಿದರು.
ಹೋಲಿ, ಮಕರ ಸಂಕ್ರಾಂತಿ, ದಿಪಾವಳಿ, ಮತ್ತಿತರ ಹಬ್ಬಗಳು ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದರೆ, ವೇದ ಉಪನಿಷತ್ತುಗಗಳಿಂದ ವೇದಗಳು, ಖಗೋಳ, ಗಣಿತ, ಕೃಷಿ, ಯೋಗ ಮತ್ತಿತರ ವಿಷಯಗಳ ಕುರಿತು ದೇಶದ ಜ್ಞಾನ ಪರಂಪರೆಯಲ್ಲಿ ವಿಶೇಷ ಸಾಧನೆಯಲ್ಲಿವೆ ಎಂದು ವಿವರಿಸಿದರು.
ಯೋಗವೂ ಭಾರತೀಯ ಸಂಸ್ಕೃತಿಯ ಅತ್ಯಮೂಲ್ಯ ಕೊಡುಗೆ ಇದೆ, ಈ ಯೋಗಕ್ಕೆ ವಿಶ್ವದ ಅನೇಕ ರಾಷ್ಟ್ರಗಳು ಸಮ್ಮತಿ ನೀಡುವುದಲ್ಲದೆ ಅಳವಡಿಸಿಕೊಂಡು ಹೋಗುತ್ತಿವೆ. ನನ್ನ ಅವಧಿಯಲ್ಲಿ ಜೂ.21ಕ್ಕೆ ಸೌತ್ ಅಮೆರಿಕದ ಖಂಡದ ಸುರಿನೆಮ್ ದೇಶಕ್ಕೆ ಭೇಟಿ ಕೊಟ್ಟಿದ್ದೆ. ಆಗ ಅಲ್ಲಿನ ಪ್ರಥಮ ಪ್ರಜೆ ಎನಿಸಿಕೊಳ್ಳುವ ಅಧ್ಯಕ್ಷೆ ಯೋಗ ದಿನಾಚರಣೆ ಆಚರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡರು. ಹೀಗೆ ನಮ್ಮ ದೇಶ ಇಡೀ ವಿಶ್ವಕ್ಕೆ ಯೋಗವನ್ನು ಕೊಡುಗೆ ಕೊಟ್ಟಿದೆ ಎಂದರು.
ವಿಕಾಸ ಸಂಗಮದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್.ಗೋವಿಂದಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಉತ್ಸವದ ಸಂಚಾಲಕ ಬಸವರಾಜ್ ಪಾಟೀಲ್ ಸೇಡಂ ಸ್ವಾಗತಿಸಿದರು.
ತೇಜಸ್ವಿನಿ ಅನಂತಕುಮಾರ್, ಶರಣಬಸವೇಶ್ವರ ಸಂಸ್ಥಾನದ ಡಾ.ದಾಕ್ಷಾಯಿಣಿ ಶರಣಬಸಪ್ಪ, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಬೀದರ್ ಗುರುನಾನಕ್ ಕ್ಷೇತ್ರದ ಸರ್ದಾರ್ ಬಲಭೀರ್ ಸಿಂಗ್ ಸೇರಿದಂತೆ ಮತ್ತಿತರರು ವೇದಿಕೆಯ ಮೇಲಿದ್ದರು.