ರಟಕಲ್ | ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವಾರ್ಡ್ ನಂ.4 ರ ಹೊಸ ಬಡಾವಣೆಯಲ್ಲಿ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಗ್ರಾಪಂ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತ ಹೋರಾಟಗಾರ ವೀರಣ್ಣ ಗಂಗಾಣಿ ಮಾತನಾಡಿ, ರಟಕಲ್ ಗ್ರಾಮದ ಹೊಸ ಬಡಾವಣೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿಗಾಗಿ ಎರಡು ನೀರಿನ ಟ್ಯಾಂಕ್ ಗಳಿದ್ದು ಪೈಪ್ ಲೈನ್ ಒಡೆದು ಹಾಳಾಗಿ ಮೋಟಾರ್ ಕೆಟ್ಟು ಹೋಗಿದೆ. ಹೊಸ ಬಾವಿಯಲ್ಲಿನ ನೀರಿನಲ್ಲಿ ಪ್ಲೋರೆಡ್ ಅಂಶವಿದೆ ಎಂದು ವೈದ್ಯಕೀಯ ವರದಿ ಬಂದಿದ್ದು, ನೀರು ಕುಡಿಯಲು ಯೋಗ್ಯವಿಲ್ಲ. ಇದರಿಂದ ದಿನನಿತ್ಯ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಎಷ್ಟೋ ಬಾರಿ ಕುಡಿಯುವ ನೀರು ತರುವುದಕ್ಕಾಗಿ ಮಕ್ಕಳು ಅಲೆದಾಡಿ ಶಾಲೆಯನ್ನು ವಂಚಿತರಾಗಿದ್ದಾರೆ. ಅನೇಕ ಬಾರಿ ಗ್ರಾಪಂ ಅಧ್ಯಕ್ಷ, ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಹೊಸ ಬಡಾವಣೆಯ ಜನರಿಗೆ ಶೀಘ್ರದಲ್ಲೇ ಒಡೆದು ಹೊದ ಹಳೆ ಪೈಪ್ ಲೈನ್ ದುರಸ್ತಿ ಮಾಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸವಲಿಂಗಪ್ಪ ಡಿಗ್ಗಿ, ಡೆಪ್ಯುಟಿ ತಹಶೀಲ್ದಾರ್ ಸಂತೋಷ ಚಂದನಕೇರಾ, ಜೆಜೆಎಮ್ ಜೆಇ ಯುವರಾಜ್ ರಾಠೋಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆಯ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ನೀಲಕಂಠ ವಾಡೆದ, ಸುಭಾಷ್ ಹುಳಿಗೇರ, ದಿಲೀಪ್ ನಾಗೂರ, ದೇವಿಂದ್ರಪ್ಪ ವಾಡೆದ, ಮಲ್ಲಿಕಾರ್ಜುನ ಮರಗುತ್ತಿ, ರಾಜು ನುಂಗಾರಿ, ಸಿದ್ದಣ್ಣ ಮಲಘಾಣ, ರೇವಣಸಿದ್ಧ ಬಿರೆದಾರ, ಭಾಗಿರಥಿ ಕಾಳಮಂದರಗಿ, ಮುರಗಮ್ಮ, ಅಂಬಮ್ಮ, ಮಲ್ಲಮ್ಮ ಭುವಿ, ವಿಜಯಕುಮಾರ್ ಸೇರಿದಂತೆ ಅನೇಕರು ಇದ್ದರು.
ರಟಕಲ್ ಪೊಲೀಸ್ ಠಾಣೆ ಪಿಎಸ್ಐ ಶಿಲಾದೇವಿ ಬಂದೋಬಸ್ತ್ ಒದಗಿಸಿದರು.