ರಶ್ಯಾದಲ್ಲಿ ಸಿಲುಕಿದ ಕಲಬುರಗಿ ಮೂಲದ ನಾಲ್ವರು ಯುವಕರನ್ನು ಸುರಕ್ಷಿತವಾಗಿ ಕರೆತರಲು ಸರಕಾರಕ್ಕೆ ಆಗ್ರಹ
ಉದ್ಯೋಗ ಕೊಡಿಸುವುದಾಗಿ ರಶ್ಯಾ ಬಾರ್ಡರ್ ಗೆ ಕಳುಹಿಸಿ ವಂಚಿಸಿದ ಏಜೆಂಟ್ ; ಕುಟುಂಬಸ್ಥರ ಆರೋಪ
ಕಲಬುರಗಿ: ಕಲಬುರಗಿ ಮೂಲದ ನಾಲ್ವರು ಯುವಕರಿಗೆ ಮುಂಬೈನ ಏಜೆಂಟ್ ಒಬ್ಬರು ರಶ್ಯಾದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡಿಸುವುದಾಗಿ ಹೇಳಿ ಯುದ್ಧಪೀಡಿತ ರಶ್ಯಾದ ಆರ್ಮಿ ಬಾರ್ಡರ್ ಗೆ ಕಳುಹಿಸಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಹಾಗರಗಾ ಕ್ರಾಸ್ ನ ಸೈಯದ್ ಇಲ್ಯಾಸ್ ಹುಸೈನ್, ಮುಹಮ್ಮದ್ ಸಮೀರ್, ಮೋಮಿನಪುರ ಬಡಾವಣೆಯ ಅಬ್ದುಲ್ ನಯೀಮ್ ಹಾಗೂ ಸುಫಿಯಾನ್ ಮೊಹಮ್ಮದ್ ಎಂಬ ನಾಲ್ವರು ಯುವಕನ್ನು ರಶ್ಯಾ ಬಾರ್ಡರ್ ಗೆ ಕಳುಹಿಸಲಾಗಿದೆ. ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಮುಂಬೈಯ ಏಜೆಂಟ್ ಬಾಬಾ ಎಂಬ ವ್ಯಕ್ತಿ 3 ಲಕ್ಷ ರೂ. ಹಣ ಪಡೆದು ರಶ್ಯಾ ಬಾರ್ಡರ್ ಗೆ ಕಳುಹಿಸಿ ವಂಚಿಸಿದ್ದಾನೆ ಎಂದು ಬಾರ್ಡರ್ ನಲ್ಲಿ ಸಿಲುಕಿರುವ ಇಲ್ಯಾಸ್ ವಿಡಿಯೋನಲ್ಲಿ ಕಣ್ಣಿರು ಹಾಕಿದ್ದಾನೆ.
ನಮ್ಮನ್ನು ಯುದ್ದದಲ್ಲಿ ನಿಯೋಜನೆ ಮಾಡಿದ್ದಾರೆ. ಸದ್ಯ ತರಬೇತಿ ನಡೆದಿದೆ ಅಂತ ಹೇಳಿ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ. ಮತ್ತೊಬ್ಬ ಯುವಕನನ್ನು ಎಲ್ಲಿ ಹಾಕಿದ್ದಾರೆ ಎಂದು ಇದುವರೆಗೂ ಗೊತ್ತಾಗಿಲ್ಲ ಎಂದು ಯುವಕ ಮತ್ತು ಅವರ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಸರಕಾರ ಆದಷ್ಟು ಬೇಗ ಮಧ್ಯೆ ಪ್ರವೇಶಿಸಿ ರಶ್ಯಾದಲ್ಲಿ ಸಿಲುಕಿರುವ ಯುವಕರನ್ನು ಭಾರತಕ್ಕೆ ಕರೆತರಬೇಕು ಎಂದು ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.