ಡಿ.23ರಂದು ರುಕ್ಮಯ್ಯ ಸಾಬಯ್ಯ ಗುತ್ತೇದಾರ ಅವರ 12ನೇ ಪುಣ್ಯಸ್ಮರಣೆ : ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ
ರೈತ ದಿನಾಚಾರಣೆ ಮತ್ತು ಧರ್ಮಸಭೆ ಕಾರ್ಯಕ್ರಮ
ಕಲಬುರಗಿ : ಕಾಯಕಯೋಗಿ, ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಹಾಗೂ ಶತಾಯುಷಿಗಳಾಗಿದ್ದ ದಿ.ರುಕ್ಮಯ್ಯ ಸಾಬಯ್ಯ ಗುತ್ತೇದಾರ ಅವರ 12ನೇ ಪುಣ್ಯಸ್ಮರಣೆ, ರೈತ ದಿನಾಚಾರಣೆ ಮತ್ತು ಧರ್ಮಸಭೆ ಕಾರ್ಯಕ್ರಮ ಡಿ.23ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ತಾಲೂಕಿನ ತಡಕಲ ಗ್ರಾಮದಲ್ಲಿ ಜರುಗಲಿದೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಹೇಳಿದ್ದಾರೆ.
ಗುರುವಾರ ಆಳಂದ ಪಟ್ಟಣದ ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಂದಗಾಂವದ ರಾಜಶೇಖರ ಮಹಾಸ್ವಾಮೀಜಿ ಹಾಗೂ ಜಿಡಗಾದ ಮುರುಘರಾಜೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾರಕೂಡನ ಚೆನ್ನವೀರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಲಿದ್ದು, ಮುತ್ಯಾನ ಬಬಲಾದನ ಗುರುಪಾದಲಿಂಗ ಮಹಾಸ್ವಾಮಿ, ಮಾಡಿಯಾಳದ ಒಪ್ಪತ್ತೇಶ್ವರ ಸ್ವಾಮೀಜಿ, ಮಾದನಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಶಾಂತವೀರ ಶಿವಾಚಾರ್ಯರು, ಚಿಣಮಗೇರಿಯ ವೀರಮಹಾಂತ ಶಿವಾಚಾರ್ಯರು, ಯಳಸಂಗಿಯ ಪರಮಾನಂದ ಸ್ವಾಮಿ, ಕೇಸರ ಜವಳಗಾದ ವೀರಂತೇಶ್ವರ ಶಿವಾಚಾರ್ಯರು, ಕಿಣ್ಣಿಸುಲ್ತಾನದ ಶಿವಶಾಂತಲಿoಗ ಶಿವಾಚಾರ್ಯರು, ಆಳಂದನ ಸಿದ್ದೇಶ್ವರ ಶಿವಾಚಾರ್ಯರು, ಚೆನ್ನಬಸವ ಪಟ್ಟದೇವರು, ನಿಂಬರ್ಗಾದ ಶಿವಲಿಂಗ ದೇವರು, ತಡಕಲನ ಸಿದ್ಧಮಲ್ಲ ಶಿವಾಚಾರ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
ಆಳಂದ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಆರೋಗ್ಯ ಶಿಬಿರ, ಶಿಕ್ಷಕರಿಗೆ ಸನ್ಮಾನ, ರಕ್ತದಾನ ಶಿಬಿರ, 1998ರಲ್ಲಿ ಸುವರ್ಣ ಮಹೋತ್ಸವ, ಸಾಮೂಹಿಕ ವಿವಾಹಗಳು ಸೇರಿದಂತೆ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ತಂದೆಯವರ ಪುಣ್ಯಸ್ಮರಣೆ ಪ್ರಯುಕ್ತ ಕಳೆದ 12 ವರ್ಷಗಳಿಂದ ಪ್ರತಿವರ್ಷ ವಿವಿಧ ರಂಗಗಳಲ್ಲಿ ಪ್ರಖ್ಯಾತಿ ಪಡೆದ ವಿಷಯ ಪರಿಣಿತರನ್ನು ತಡಕಲ ಗ್ರಾಮಕ್ಕೆ ಕರೆಯಿಸಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ರೈತರಿಗಾಗಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಡಿ.22 ರಂದು ರಾತ್ರಿ ಮಲ್ಲಯ್ಯ ಶಾಸ್ತ್ರಿಗಳಿಂದ ಕೀರ್ತನೆ, ಶಿವರುದ್ರಯ್ಯ ಸ್ವಾಮಿ ಗೌಡಗಾಂವ ಅವರಿಂದ ಸಂಗೀತ ಸೌರಭ ಮತ್ತು ವಿವಿಧ ಭಜನಾ ಮಂಡಳಿಗಳಿoದ ಜಾಗರಣೆ ನಡೆಯಲಿದೆ. ಕೃಷಿಯಲ್ಲಿ ಸಾಧನೆ ಮಾಡಿರುವ ತಾಲೂಕಿನ ಐದು ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ವಿಶೇಷ ಆಹ್ವಾನಿತರಾಗಿ ಜಲ ತಜ್ಞ ಚಿತ್ರದುರ್ಗದ ಎನ್ ಜೆ ದೇವರಾಜರೆಡ್ಡಿ ಅವರಿಂದ ವಿಶೇಷ ಉಪನ್ಯಾಸ ಜರುಗಲಿದೆ ಎಂದು ಹೇಳಿದರು.